ಬಸವಕಲ್ಯಾಣ: ಜೀವನದಲ್ಲಿ ಕಷ್ಟ-ಸುಖಗಳು ಬರುತ್ತವೆ. ಆದರೆ ಕಷ್ಟ ಬಂದಾಗ ಆತ್ಮಸ್ಥೈರ್ಯದಿಂದ ಜೀವನ ಸಾಗಿಸಬೇಕು. ಸದ್ಗುರು ಚೆನ್ನಬಸವ ಶಿವಯೋಗಿಗಳ ಕೃಪಾಶಿರ್ವಾದ ಸದಾ ನಿಮ್ಮೆಲ್ಲರ ಮೇಲಿರಲಿದೆ ಎಂದು ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಹಾರಕೂಡದ ಶ್ರೀ ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಗುರುಲಿಂಗ ಶಿವಾಚಾರ್ಯರ ೫೬ನೇ ಪುಣ್ಯಸ್ಮರಣೋತ್ಸವ, ೩೯ನೇ ಅನುಭಾವ ಪ್ರಚಾರ ಉಪನ್ಯಾಸ ಮಾಲೆ, ಉಪನ್ಯಾಸ, ಗ್ರಂಥ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಶ್ರೀ ಚೆನ್ನಬಸವ ಶಿವಯೋಗಿಗಳ ಅಧ್ಯಾತ್ಮದ ದಿವ್ಯ ಶಕ್ತಿ ಭಕ್ತರನ್ನು ಕಾಪಾಡಲಿದೆ ಎಂದರು.
ಜ್ಞಾನಶಕ್ತಿ, ಕ್ರಿಯಾಶಕ್ತಿ, ಸಮಯ ಪ್ರಜ್ಞೆ ಮಾನವನಲ್ಲಿದೆ. ಅಧಿಕಾರ, ಅಸ್ತಿ, ಐಶ್ವರ್ಯ ಏನೆಲ್ಲ ಇದ್ದರೂ ಸಹ ಮಾನವೀಯತೆ ಇಲ್ಲದಿದ್ದರೆ ಜೀವನ ವ್ಯರ್ಥ. ಆರೋಗ್ಯ ಚೆನ್ನಾಗಿಟ್ಟುಕೊಂಡು ಆದರ್ಶ ಕಾರ್ಯಗಳನ್ನು ಮಾಡಿದಾಗ ಜೀವನದಲ್ಲಿ ಉನ್ನತಿ ಕಾಣಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಶರಣು ಸಲಗರ ಮಾತನಾಡಿ, ಹಾರಕೂಡ ಮಠದಲ್ಲಿ ಜ್ಞಾನ ದಾಸೋಹದ ಜತೆಗೆ ನಿರಂತರವಗಿ ಅನ್ನದಾಸೋಹ ನಡೆಯುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರಕ್ಕೆ ಹಾರಕೂಡ ಶ್ರೀಗಳ ಕೊಡುಗೆ ಅನನ್ಯ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವ ಮೂಲಕ ಸಾಧನೆಗೆ ಪ್ರೋತ್ಸಾಹಿಸುವ ಮಹತ್ತರ ಕಾರ್ಯ ಹಾರಕೂಡ ಶ್ರೀಗಳಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಬಣ್ಣಿಸಿದರು.
ಧಾರವಾಡನ ಹಿರಿಯ ಸಾಹಿತಿ ಡಾ. ಸವದತ್ತಿಮಠ ವಿಶೇಷ ಉಪನ್ಯಾಸ ನೀಡಿ, ಹಾರಕೂಡ ಮಠ ಸರ್ವರನ್ನು ಸಮಾನವಾಗಿ ಕಾಣುವ ಸಮನ್ವಯತೆಯ ಮಠವಾಗಿದೆ. ಧರ್ಮ, ಸಾಹಿತ್ಯ, ಸಮಾಜ, ಸಂಸ್ಕೃತಿ ಹೀಗೆ ಹಲವು ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಶ್ರೀಗಳ ಸಮಾಜಪರ ಕಾಳಜಿ ಶ್ಲಾಘನಾರ್ಹ. ಪುಸ್ತಕ ಜ್ಞಾನದ ಭಂಡಾರ. ವಚನ ಸಾಹಿತ್ಯ ಅಮೂಲ್ಯ ರತ್ನ. ಶ್ರೀಮಠದಿಂದ ನೂರಾರು ಮೌಲಿಕ ಗ್ರಂಥಗಳನ್ನು ಪ್ರಕಟಿಸಲಾಗಿದ್ದು, ಪುಸ್ತಕದ ಮೂಲಕ ಮಸನ್ನು ಶುದ್ಧಗೊಳಿಸುವ ಕಾರ್ಯ ಹಾರಕೂಡ ಶ್ರೀಗಳಿಂದ ನಡೆಯುತ್ತಿದೆ ಎಂದರು.
ಪ್ರಗತಿಪರ ರೈತ ಹಬಾಳ(ಟಿ)ನ ಅಭಿಷೇಕರಡ್ಡಿ ದೇಶಮುಖ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಬರೆದ ಚನ್ನದಿಪ್ತಿ ಹಾಗೂ ಡಾ.ಸಂಗಮೇಶ ಸವದತ್ತಿಮಠ ಬರೆದ ವೈವಿಧ್ಯ ಗ್ರಂಥಗಳನ್ನು ಶಿವಶರಣಯ್ಯ ಸ್ವಾಮಿ ಕಂಬಳಿಮಠ ಬಿಡುಗಡೆಗೊಳಿಸಿದರು.
ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ಪ್ರಮುಖರಾದ ಸುಭಾಷಚಂದ್ರ ನಾಗರಾಳೆ, ಜಗನ್ನಾಥ ಪಾಟೀಲ್ ಮಂಠಾಳ, ಶಿವರಾಜ ನರಶೆಟ್ಟಿ, ಬಿಕೆ ಹಿರೇಮಠ, ಪಿ.ಕೆ.ಹಿರೇಮಠ, ಮಲ್ಲಿನಾಥ ಹಿರೇಮಠ, ಸಿದ್ರಾಮಪ್ಪ ಗುದಗೆ, ಮೇಘರಾಜ ನಾಗರಾಳೆ, ಶಿವಶರಣಪ್ಪ ಸಿರಿ, ಶರಣಭೂಪಾಲರೆಡ್ಡಿ, ಡಾ.ವಿಸಿದ್ಧಪ್ಪ ಪಾಟೀಲ್, ರಾಜಕುಮಾರ ಸಿರಗಾಪುರ, ವೀರಣ್ಣ ಮೂಲಗೆ ಕೋಹಿನೂರು, ಶರಣಪ್ಪ ಬಿರಾದಾರ, ಸಂಜುಕುಮಾರ ದೇಗಾಂವ ಗದಲೇಗಾಂವ, ವೀರಣ್ಣ ದುರ್ಗೆ ಅಂಬಲಗಾ, ಬಸವರಾಜ ಕುಂಬಾರ ಮುಡಬಿ, ಸಂದೀಪ ಬುಯೆ ಉಪಸ್ಥಿತರಿದ್ದರು. ಸುಭಾಷ ಮುರುಡ ಸ್ವಾಗತಿಸಿದರೆ, ಅಂಬರಾಯ ಉಗಾಜಿ ನಿರೂಪಿಸಿದರು.
ಸಂಗೀತ ಪ್ರಾಧ್ಯಾಪಕ ಸಿದ್ರಾಮಯ್ಯ ಸ್ವಾಮಿ ಗೋರ್ಟಾ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಜನಾರ್ಧನ ವಾಘಮಾರೆ, ನವಲಿಂಗ ಪಾಟೀಲ್ ಹಾಗೂ ರಾಜಶ್ರೀ ಸ್ವಾಮಿ ಸಾಥ್ ನೀಡಿದರು.
ಪ್ರಶಸ್ತಿ ಪ್ರದಾನ : ಕಲಬುರಗಿಯ ನಿವೃತ್ತ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ಎಸ್.ಎಂ. ಹಿರೇಮಠ ಅವರಿಗೆ ಪೀಠಾಧಿಪತಿ ಶ್ರೀ ಡಾ. ಚನ್ನವೀರ ಶಿವಾಚಾರ್ಯ ಪ್ರದಾನ ಮಾಡಿ ಆಶೀರ್ವದಿಸಿದರು. ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದ್ದು, ಪ್ರಶಸ್ತಿಯು ಒಂದು ಲಕ್ಷ ರೂ. ನಗದು, ಎರಡು ತೊಲ ಚಿನ್ನದ ಪದಕ ಮತ್ತು ಫಲಕವನ್ನು ಒಳಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ವಿಶ್ವದ ಆದರ್ಶ ನಾಯಕರಾಗಿದ್ದು, ಉತ್ತಮ ಕಾರ್ಯ ಮಾಡುತ್ತಿದ್ದಾರೆ. ದೇಶದಲ್ಲಿ ರೈತರ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿ ಮಾಡಬೇಕು. ಈ ಕುರಿತು ರೈತರ ಪರವಾಗಿ ಪ್ರಧಾನಿ ಮೋದಿ ಅವರಲ್ಲಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಕೇಳಿಕೊಳ್ಳುತ್ತೇವೆ.
| ಶ್ರೀ ಡಾ.ಚನ್ನವೀರ ಶಿವಾಚಾರ್ಯರು