ಕೆ.ಎಂ.ದೊಡ್ಡಿ: ಸಮೀಪದ ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ದೇವಾಲಯದಲ್ಲಿ ತೆಪ್ಪೋತ್ಸವ ಜರುಗಿತು.
ಐದು ದಿನಗಳಿಂದ ಶಿವರಾತ್ರಿ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದವು. ದೇವಾಲಯ ಅಭಿವೃದ್ಧಿ ಸಮಿತಿಯಿಂದ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನೇರವೇರಿತು. ದೇವಾಲಯದಲ್ಲಿ ಶಿವ-ಪಾರ್ವತಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಉತ್ಸವ ಮೂತಿಯನ್ನು ಮಂಗಳ ವಾದ್ಯದೊಂದಿಗೆ ಪಾವನ ಗಂಗೆಯ ಕಲ್ಯಾಣಿ ಬಳಿ ತರಲಾಯಿತು. ಈ ವೇಳೆ ಶ್ರೀ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ಶ್ರೀ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ ಸದಸ್ಯ, ಭಾರತೀ ಎಜುಕೇಷನ್ ಟ್ರಸ್ಟ್‌ನ ಸಿಇಒ ಆಶಯ್ ಮಧು ದೀಪ ಬೆಳಗುವ ಮೂಲಕ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು.
ಕಲ್ಯಾಣಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕಲ್ಯಾಣಿಯಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಕಲ್ಯಾಣಿಯ ಮಧ್ಯ ಭಾಗದಲ್ಲಿ ಭಾರತೀನಗರದ ಶ್ರೀ ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಕಾರ್ತಿಕ್ ಆರಾಧ್ಯ ಗಂಗಾರತಿ ಬೆಳಗಿದರು. ದೇವಾಲಯದ ಪ್ರಾಂಗಣದಲ್ಲಿ ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್ ವಿದ್ಯಾರ್ಥಿನಿಯರು ಪ್ರದರ್ಶಿಸಿದ ಭರತನಾಟ್ಯ ಭಕ್ತರ ಗಮನ ಸೆಳೆಯಿತು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಮೂವತ್ತೆರಡು ವರ್ಷಗಳ ಹಿಂದೆ ನನ್ನ ತಂದೆ ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಅವರು ಹನುಂತನಗರವನ್ನು ಒಂದು ಆಧ್ಯಾತ್ಮಿಕ ಕ್ಷೇತ್ರವನ್ನು ನಿರ್ಮಾಣ ಮಾಡಲು ಪಣತೊಟ್ಟಿದ್ದು ಅವರ ಕನಸು ಈಡೇರಿದೆ. ದೇವಾಲಯಕ್ಕೆ ಹೆಚ್ಚು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತರರಾಗಲಿ ಎಂಬ ದೃಷ್ಟಿಯಿಂದ ನನ್ನ ಪುತ್ರ ಆಶಯ್ ಮಧು ತೆಪ್ಪೋತ್ಸವದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾಗಿ ನಡೆಯಲು ಕಾರಣರಾಗಿದ್ದು ಮುಂದಿನ ವರ್ಷ ಇನ್ನೂ ಅದ್ಧೂರಿಯಾಗಿ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಬಿಂದು ಮಧು ಮಾದೇಗೌಡ, ಬೃಂದಾ ಆಶಯ್, ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಗುರುದೇವರಹಳ್ಳಿ ಸಿದ್ದೇಗೌಡ, ಭಾರತೀ ಹೆಲ್ತ್ ಸೈನ್ಸ್ ನಿರ್ದೇಶಕ ಡಾ.ತಮಿಜ್‌ಮಣಿ, ಪ್ರೊ.ಎಸ್.ನಾಗರಾಜು, ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ, ಡಾ.ಬಾಲಸುಬ್ರಮಣ್ಯಂ, ಡಾ.ಚಂದನ್, ಡಾ.ಎಸ್.ಎಲ್.ಸುರೇಶ್, ಸಿ.ವಿ.ಮಲ್ಲಿಕಾರ್ಜುನ, ಮುಖಂಡರಾದ ಆರ್.ಸಿದ್ದಪ್ಪ, ಬಿ.ಗಿರೀಶ್ ಇದ್ದರು.