ಹಾಸನ: ಆತ್ಮದ ಮುಕ್ತಿಯೇ ಯೋಗದ ಮಂತ್ರ, ನಿಷ್ಕಾಮ ಕರ್ಮವೇ ಮಹಾಯೋಗ ಎಂದು ವಿವೇಕಾನಂದರು ಪ್ರತಿಪಾದಿಸಿದ್ದರು ಎಂದು ಯೋಗ ಶಿಕ್ಷಕ ಎಚ್.ಬಿ.ರಮೇಶ್ ತಿಳಿಸಿದರು.
ನಗರದ ಮಹಾರಾಜ ಪಾರ್ಕಿನಲ್ಲಿರುವ ವಿವೇಕಾನಂದ ಯೋಗ ಶಿಕ್ಷಣ ಶಾಲೆಯಲ್ಲಿ ನಡೆದ ಸ್ವಾ ಮಿ ವಿವೇಕಾನಂದರ 160ನೇ ಜನ್ಮ ದಿನಾಚರಣೆ ಅಂಗವಾಗಿ ಶಾಲೆಯಲ್ಲಿರುವ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಸ್ರೀಯರನ್ನು ಗೌರವಿಸಿದರೆ ದೇವರನ್ನು ಪೂಜಿಸಿದಂತೆ.ವಿವೇಕಾನಂದರನ್ನು ಓದಿಕೊಂಡರೆ ಭಾರತವನ್ನು ತಿಳಿದಂತೆ ಎಂದು ಹೇಳಿದರು.
ಸಂತರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಯುವ ಜನತೆಯನ್ನು ಸಮಾನವಾಗಿ ಪ್ರಭಾವಿಸಿದ ವಿವೇಕಾನಂದರು ನೈತಿಕತೆಯ ಆಧಾರದ ಮೇಲೆ ಭಾರತವನ್ನು ಕಟ್ಟಬೇಕೆಂಬ ಬಯಕೆ ಹೊಂದಿದ್ದರು. ರಾಮಕೃಷ್ಣ ಪರಮಹಂಸರನ್ನು ಗುರುವನ್ನಾಗಿ ಸ್ವೀಕರಿಸಿದ ಅವರು ಗುರುಶಿಷ್ಯ ಪರಂಪರೆಯಲ್ಲಿ ಇಂದಿಗೂ ಅತ್ಯುತ್ತಮ ಮಾದರಿಯಾಗಿ ಜನಮಾನಸದಲ್ಲಿ ಸ್ಥಿರವಾಗಿ ನಿಂತಿದ್ದಾರೆ ಎಂದರು.
ನಿವೃತ್ತ ಉಪನ್ಯಾಸಕ ಜಿ.ಬಿ.ಶಿವಣ್ಣ ಮಾತನಾಡಿ, ಯೋಗವೆಂಬುದು ಜಗತ್ತಿನ ವಾಸ್ತವದೊಂದಿಗೆ ದೇವರನ್ನು ಬಂದಿಸುವ ಕೊಂಡಿಯಾಗಿದೆ ಎಂದು ಪ್ರತಿಪಾದಿಸಿದ ವಿವೇಕಾನಂದರು ಅಷ್ಠಾಂಗ ಯೋಗವನ್ನು ರಾಜಯೋಗವನ್ನಾಗಿ ಜಗತ್ತಿಗೆ ಪರಿಚಯಿಸಿದರು. ಶ್ರದ್ಧೆ, ನಿಷ್ಠೆ, ದೈರ್ಯ, ಸ್ಥೈರ್ಯ, ಜ್ಞಾನ ವಿವೇಕಗಳು ಯುವಜನರ ಏಳಿಗೆಯಲ್ಲಿ ಮಾರ್ಗದರ್ಶಿಯಾಗಿವೆ ಎಂದು ಪ್ರತಿಪಾದಿಸಿದರು ಎಂದರು
ಕಾರ್ಯಕ್ರಮದಲ್ಲಿ ಯೋಗಶಾಲೆಯ ಹಿರಿಯ ಸದಸ್ಯ ರಾಮಚಂದ್ರು, ಪುಟ್ಟಪ್ಪ, ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಧರ್ಮಪ್ಪ, ಹಿರಿಯ ಪತ್ರಕರ್ತ ಉದಯಕುಮಾರ್,ಉದ್ಯಮಿಗಳಾದ ರಾಜೇಶ್, ಗೋಪಿ.ಆಡಿಟರ್ ರಮೇಶ್, ನಿರ್ಮಲ, ಚಂದ್ರಕಲಾ, ಕೋಮಲ , ಮುಂತಾದವರು ಭಾಗವಹಿಸಿದ್ದರು.