ಬೇಲೂರು: ಇತಿಹಾಸ ಪುಟಗಳಲ್ಲಿ ಆಸ್ತಿ, ಅಧಿಕಾರ, ಹೆಣ್ಣು, ಸಂಪತ್ತಿಗಾಗಿ ಸಾವಿರಾರು ಯುದ್ಧ ನಡೆದಿವೆ. ಆದರೆ ಶಿಕ್ಷಣ, ಆತ್ಮಗೌರವ, ಸ್ವಾಭಿಮಾನಕ್ಕಾಗಿ ನಡೆದ ವಿಶ್ವದ ಏಕೈಕ ಯುದ್ಧವೇ ಭೀಮಾ ಕೋರೆಗಾಂವ್ ಯುದ್ಧ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಹಾಸನ ಜಿಲ್ಲಾ ಪ್ರಧಾನ ಸಂಚಾಲಕ ಲಕ್ಷ್ಮಣ್ ಹೇಳಿದರು.
ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಪದಾಧಿಕಾರಿಗಳು ಭಾನುವಾರ ಸಂಜೆ ಅಂಬೇಡ್ಕರ್ ನಗರದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಯುದ್ಧದಲ್ಲಿ ಮಡಿದ ವೀರ ಯೋಧರ ಸ್ಮರಣಾರ್ಥ ಮೇಣದ ಬತ್ತಿಗಳನ್ನು ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಜನವರಿ 1, 1818 ರಂದು ಭೀಮಾ ಕೋರೆಗಾಂವ್‌ನಲ್ಲಿ ಮಹರ್ ವೀರಯೋಧರು ಶೋಷಿತರ ವಿಮೋಚನೆಗಾಗಿ ತಮ್ಮ ಪ್ರಾಣತ್ಯಾಗ ಮಾಡಿ ಅಸ್ಪಶ್ಯ ಸಮುದಾಯಗಳಿಗೆ ಹಕ್ಕುಗಳನ್ನು ದೊರಕಿಸಿಕೊಟ್ಟ ಚಾರಿತ್ರಿಕ ದಿನ ಎಂದು ವಿವರಿಸಿದರು. ನಮ್ಮೆಲ್ಲರ ವಿಮೋಚನಕಾರ ಅಂಬೇಡ್ಕರ್ ಅವರು ಪ್ರತಿವರ್ಷ ಜ.1 ರಂದು ಕೋರೆಗಾಂವ್‌ನಲ್ಲಿರುವ ಮಹರ್ ವೀರಯೋಧರ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸುತ್ತಿದ್ದರು. ಆದ್ದರಿಂದ ಅಸ್ಪಶ್ಯರಿಗೆ ಹಕ್ಕುಗಳನ್ನು ಗಳಿಸಿಕೊಟ್ಟ ಈ ಮಹಾನ್ ವೀರ ಯೋಧರ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ದಸಂಸ(ಅಂಬೇಡ್ಕರ್ ವಾದ)ತಾಲೂಕು ಸಂಘಟನಾ ಸಂಚಾಲಕರಾದ ಧರ್ಮಯ್ಯ, ಭದ್ರಯ್ಯ, ವಸಂತ ಕುಮಾರ್, ನಿಂಗರಾಜು, ನಾಗರಾಜು, ಮುಖಂಡರಾದ ಆಟೋ ಲಕ್ಷ್ಮಣ್, ಜಗದೀಶ್, ಚಂದ್ರಪ್ಪ, ಪಾಪಣ್ಣಿ, ಗಂಗಾಧರ್, ಮಹೇಶ್, ನವೀನ್ ಇತರರಿದ್ದರು.