ಮೈಸೂರು: ಆದರ್ಶ ಜೀವನ ಹಾಗೂ ಆತ್ಮ ಸಾಕ್ಷಾತ್ಕಾರವೇ ನಮ್ಮ ಜೀವನದ ಗುರಿಯಾಗಬೇಕು. ಈ ರೀತಿಯ ಜೀವನ ನಡೆಸುವಾಗ ಹಲವು ಸೋಲುಗಳು ಎದುರಾದರೂ ಕಂಗೆಡಬಾರದು ಎಂದು ಬೆಂಗಳೂರಿನ ಶಿವನಹಳ್ಳಿ ರಾಮಕೃಷ್ಣ ಮಿಷನ್‌ನ ಸ್ವಾಮಿ ಮಂಗಳನಾಥಾನಂದ ಹೇಳಿದರು.
ಯಾದವಗಿರಿಯ ಶ್ರೀ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಬುಧವಾರ ಆಶ್ರಮದ ವಾರ್ಷಿಕೋತ್ಸವ ಹಾಗೂ ಶ್ರೀ ರಾಮಕೃಷ್ಣ ಪರಮಹಂಸರ 188ನೇ ಜನ್ಮ ದಿನೋತ್ಸವ ಪ್ರಯುಕ್ತ ‘ಪತಿತ ಪಾವನೆ ಶಾರದಾ’ ವಿಷಯದ ಕುರಿತು ಮಾತನಾಡಿ, ನಮ್ಮ ಬದುಕಿನಲ್ಲಿ ಕಷ್ಟಗಳು ಎದುರಾಗುವುದು ಸಹಜ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳು ಇಲ್ಲಿ ದೊರೆಯುವ ಪ್ರತಿಯೊಂದು ಅನುಭವವನ್ನು ಪಡೆಯಲೇ ಬೇಕು, ಅದು ಭಗವಂತನ ಇಚ್ಛೆ ಎಂದರು.
ಪ್ರತಿಯೊಬ್ಬರು ಭಗವಂತ ನಮ್ಮವನು ಎಂಬ ಭಾವನೆ ಹೊಂದಬೇಕು. ನಮ್ಮ ಬಂಧು ಬಳಗದವರನ್ನು ನಾವು ಹೇಗೆ ನಮ್ಮವರು ಎಂದು ಭಾವಿಸುತ್ತೇವೆಯೋ ಅದೇ ರೀತಿ ದೇವರೂ ಸಹ ನಮ್ಮವನು ಎಂಬ ಭಾವನೆ ಜನರಲ್ಲಿ ಮೂಡಬೇಕು ಎಂದು ಹೇಳಿದರು.
ಈ ಸಂದರ್ಭ ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿಮುಕ್ತಿದಾನಂದ ಹಾಗೂ ಇತರರು ಇದ್ದರು.