ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಆತ್ಮ ನಿರ್ಭರಕ್ಕೆ ಬೆಂಬಲ ನೀಡಿ ವಿಜಯಪುರ ನಗರದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಂದ ಹಣತೆ ಖರೀದಿ ಮಾಡುವ ಮೂಲಕ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ತಮ್ಮ ಸರಳತೆಯನ್ನು ಮೆರೆದಿದ್ದಾರೆ. ದೀಪಾವಳಿ ಹಿನ್ನೆಲೆ ಮಗಳು ಲಕ್ಷ್ಮಿ ಜೊತೆ ಮಾರುಕಟ್ಟೆಗೆ ಆಗಮಿಸಿದ ಅವರು ನಗರದ ಡಾ. ಅಂಬೇಡ್ಕರ್ ಸರ್ಕಲ್ ಬಳಿ ರಸ್ತೆ ಬದಿ ದೀಪಾವಳಿ ಪೂಜಾ ಸಾಮಗ್ರಿಗಳ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಂದ ದೀಪ ಹಚ್ಚುವ ಹಣತೆ ಖರೀದಿ ಮಾಡಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಬೆಂಬಲ ನೀಡಿದ್ದು, ಆತ್ಮನಿರ್ಭರ ಭಾರತ ಕರೆಗೆ ಬೆಂಬಲಿಸಿ ಸ್ಥಳೀಯರಿಂದ ದೀಪಾವಳಿ ಸಾಮಗ್ರಿ ಖರೀದಿಸಿದ್ದಾರೆ. ಜನರು ಈ ಬಾರಿ ಅತ್ಯಂತ ಸರಳವಾಗಿ ದೀಪಾವಳಿ ಆಚರಿಸಬೇಕು ಜೊತೆಗೆ ಸ್ಥಳೀಯರು ತಯಾರಿಸಿದ ಗುಡಿ ಕೈಗಾರಿಕೆ ಸಾಮಾನುಗಳನ್ನೇ ಖರೀದಿಸಬೇಕು ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಜನರಲ್ಲಿ ಮನವಿ ಮಾಡಿದ್ದಾರೆ.