ಶ್ರೀ ರಂಭಾಪುರಿ ಪೀಠದಲ್ಲಿ ಶ್ರಾವಣ ತಪೋನುಷ್ಠಾನ ಕಾರ್ಯಕ್ರಮದಲ್ಲಿ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು, ಬಿ.ಎಲ್.ಬೋಜೇಗೌಡರು, ಬೆಳಗೊಳ ಶಿವಶಂಕರ, ಶಿರವಾಸೆ ವಿಶ್ವನಾಥ, ಪ್ರಶಾಂತ ರಿಪ್ಪನ್‌ಪೇಟೆ ಇತರರಿದ್ದರು.  
ಜಿಲ್ಲೆ

ಆತ್ಮ ಜ್ಞಾನವೇ ನಿಜವಾದ ವಿದ್ಯೆ

ಬಾಳೆಹೊನ್ನೂರು: ಮೌಢ್ಯತೆಯ ಮಾರಿ ಮನುಷ್ಯನನ್ನು ಆವರಿಸಿದೆ. ನ್ಯಾಯ ನೀತಿ ಧರ್ಮದ ಅರಿವು ಇಲ್ಲದಂತಾಗಿ ಕವಲು ದಾರಿಯಲ್ಲಿ ಸಿಲುಕಿದ್ದಾನೆ. ನಿಜವಾದ ಮೌಲ್ಯಗಳ ಉಳಿವು ಅಳಿವು ಮಾನವನ ಆಚರಣೆಯಲ್ಲಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.

ಅವರು ಭಾನುವಾರ ಶ್ರೀ ರಂಭಾಪುರಿ ಪೀಠದಲ್ಲಿ ಶ್ರಾವಣ ತಪೋನುಷ್ಠಾನ ಹಾಗೂ ಲಿಂ.ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳವರ ಲಿಂಗಾಂಗ ಸಾಮರಸ್ಯದ 76ನೇ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿದ್ಯೆ ಎಂದರೆ ಕೇವಲ ಅಕ್ಷರ ಜ್ಞಾನವಲ್ಲ. ಜಗದಲ್ಲಿ ಹೇಗೆ ಬಾಳಬೇಕೆಂಬುದನ್ನು ಕಲಿಸುವ ಆತ್ಮ ಜ್ಞಾನವೇ ನಿಜವಾದ ವಿದ್ಯೆ. ಒಳ್ಳೆಯ ಮನಸ್ಸಿನಿಂದ ಯೋಚಿಸಿದರೆ ಕೆಟ್ಟವರಲ್ಲೂ ಒಳ್ಳೆತನ ಕಾಣಬಹುದು. ಆದರೆ ಕೆಟ್ಟ ಮನಸ್ಸಿನಿಂದ ಯೋಚಿಸಿದರೆ ಒಳ್ಳೆಯವರಲ್ಲೂ ಕೆಟ್ಟದ್ದೇ ಕಾಣುತ್ತದೆ. ಸುಣ್ಣದ ನೀರು ಹಾಲಿನಂತೆ ಕಂಡರೂ ಅದರ ಒಳಗಿನ ರೂಪ ಬೇರೆಯೇ ಇರುತ್ತದೆ ಎಂಬುದರ ಅರಿವನ್ನು ಭಕ್ತ ಸಂಕುಲಕ್ಕೆ ತಲುಪಿಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸಿದ ಕೀರ್ತಿ ಲಿಂ.ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳಿಗೆ ಸಲ್ಲುತ್ತದೆ.
ಮಾದನ ಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮದಲ್ಲಿ ಗುರುವಿಗೆ ದೊಡ್ಡ ಸ್ಥಾನವಿದೆ. ಜಗದ ಜನರ ಅಜ್ಞಾನ ಕಳೆದು ಜ್ಞಾನವನ್ನು ಉಂಟು ಮಾಡುವುದೇ ಗುರು ಧರ್ಮವಾಗಿದೆ. ಶ್ರೀ ಜಗದ್ಗುರು ರಂಭಾಪುರಿ ಪೀಠದ ನವನಿರ್ಮಾಣ ಶಿಲ್ಪಿ ಲಿಂ.ಶ್ರೀ ಶಿವಾನಂದ ಜಗದ್ಗುರುಗಳು ಬದುಕಿನುದ್ದಕ್ಕೂ ಧರ್ಮ ಸಂಸ್ಕೃತಿ ಎತ್ತಿ ಹಿಡಿದರೆಂದರು.
ಸಮಾರಂಭದಲ್ಲಿ ಬೊಗಸೆ ಬಿ.ಎಲ್.ಬೋಜೇಗೌಡರು, ಬೆಳಗೊಳ ಶಿವಶಂಕರ, ಶಿರವಾಸೆ ವಿಶ್ವನಾಥ, ಪ್ರಶಾಂತ ರಿಪ್ಪನ್‌ಪೇಟೆ, ಶಶಿಕುಮಾರ ಸುರಗೀಮಠ, ಪ್ರಭುದೇವ ಕಲ್ಮಠ, ಲೆಕ್ಕಾಧಿಕಾರಿ ಸಂಕಪ್ಪನವರ, ವಿರುಪಾಕ್ಷ ಶಾಸಿ, ಸಿದ್ಧೇಶ್ವರ ಶಾಸಿ, ತುಮಕೂರು ಪವನ್ ಕುಮಾರ್, ಲಕ್ಷ್ಮೇಶ್ವರದ ರಾಜಶೇಖರ-ಶಿವಲಿಂಗಯ್ಯ ಹಾಲೇವಾಡಿಮಠ ಸಹೋದರರು ಜಗದ್ಗುರುಗಳ ಆಶೀರ್ವಾದ ಪಡೆದರು. ಅಬ್ಬಿಗೇರಿ-ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಖಾಂಡ್ಯ ಮತ್ತು ಜಾಗರ ಹೋಬಳಿ ಶಿಷ್ಯ ಸಮುದಾಯದಿಂದ ಅನ್ನ ದಾಸೋಹ ನೆರವೇರಿತು.
ಗಂಗಾಧರ ಹಿರೇಮಠ ಇವರಿಂದ ಭಕ್ತಿಗೀತೆ ಜರುಗಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.