ಜಿಲ್ಲೆ

ಆತಿಯಾದ ಆತ್ಮವಿಶ್ವಾಸ ಸಲ್ಲದು

ಚಿತ್ರದುರ್ಗ: ಅತಿಯಾದ ಆತ್ಮವಿಶ್ವಾಸದಿಂದ ಕೆಲವೊಮ್ಮೆ ಸಿಗುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರೋಣ್‌ವಾಸುದೇವ ಹೇಳಿದರು.

ನಗರದ ವಕೀಲರ ಭವನದಲ್ಲಿ ಬುಧವಾರ ಸಿವಿಲ್ ನ್ಯಾಯಾಧೀಶರ ಹುದ್ದೆ ಆಕಾಂಕ್ಷಿ ಪರೀಕ್ಷಾರ್ಥಿಗಳಿಗೆ ನ್ಯಾಯಾಧೀಶರು, ಹಿರಿಯ ವಕೀಲರು ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತೇವೆ ಎಂಬ ಆತ್ಮವಿಶ್ವಾಸ ಸರಿ. ಆದರೆ, ಅತಿಯಾದ ಆತ್ಮವಿಶ್ವಾಸ ಸಲ್ಲ. ಆದ್ದರಿಂದ ಎಲ್ಲರಿಗೂ ತರಬೇತಿ ಅಗತ್ಯವಿದೆ ಎಂದು ತಿಳಿಸಿದರು.

ನೇಪಾಳದ ಘಟನೆ ನೋಡಿದರೆ ಯುವ ಶಕ್ತಿ ಗಟ್ಟಿತನ ಎಂತದ್ದೆಂಬುದು ಗೊತ್ತಾಗುತ್ತದೆ. ಈ ಶಕ್ತಿ ಸದ್ಬಳಕೆ ಆದರೆ ಸುಂದರ ದೇಶ ಕಟ್ಟಬಹುದು. ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸಲು ಸಂಸದರಿಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಆದರೂ 15 ಮತಗಳು ತಿರಸ್ಕೃತಗೊಂಡಿವೆ. ತರಬೇತಿ ಪಡೆಯದಿದ್ದರೆ ಉತ್ತಮ ಫಲಿತಾಂಶ ಕಷ್ಟ. ತರಬೇತಿ ಜ್ಞಾನ ಪರೀಕ್ಷೆಯೊಂದಿಗೆ ವೃತ್ತಿಗೂ ನೆರವಾಗಲಿ ದೆ ಎಂದು ತಿಳಿಸಿದರು.

ಯುವ ವಕೀಲರು ಕೋರ್ಟ್ ಕಲಾಪಗಳಲ್ಲಿ ಭಾಗವಹಿಸಿ ವಾದ-ವಿವಾದಗಳನ್ನು ವೀಕ್ಷಿಸುವಂತೆ ಕಿರಿಯ ವಕೀಲರಿಗೆ ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್. ಮಹೇಶ್ವರಪ್ಪ ಮಾತನಾಡಿ, 70 ಯುವ ವಕೀಲರು ಪರೀಕ್ಷೆ ಬರೆಯಲಿದ್ದಾರೆ. ಸತತ ಪ್ರಯತ್ನದಿಂದ ಯಶಸ್ಸನ್ನು ಕಾಣಬಹುದು. ವಕೀಲರ ಸಂಘದ ಚುನಾವಣೆಯಲ್ಲಿ 2 ಬಾರಿ ಸೋತಿದ್ದ ನಾನು ಮೂರನೇ ಬಾರಿಗೆ ಗೆದ್ದಿದ್ದೇನೆ. ಕಂಪ್ಯೂಟರ್ ತರಬೇತಿ ನೀಡುವ ಕುರಿತು ಸಂಘದಲ್ಲಿ ಚರ್ಚಿಸುತ್ತೇನೆ ಎಂದರು.

ನ್ಯಾಯಾಧೀಶರಾದ ವೀರಣ್ಣ ಸೋಮಶೇಖರ್, ಗಂಗಾಧರ್ ಹಡಪದ, ಡಿ. ಮಮತಾ, ಎಂ. ವಿಜಯ್, ಎಂ. ಚೈತ್ರಾ, ಉಜ್ವಲಾ ವೀರಣ್ಣ ಸಿದ್ದಣ್ಣನವರ್, ರಶ್ಮಿ ಎಸ್. ಮರಡಿ, ಪೂಜಾ ಬೆಳಕೇರಿ, ನಿಖಿತ ಎಸ್. ಅಕ್ಕಿ, ಆರ್. ಸಹನಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ಒ. ಜಗದೀಶ್ ಗುಂಡೇರಿ, ಉಪಾಧ್ಯಕ್ಷೆ ಸಾವಿತ್ರಮ್ಮ, ಖಜಾಂಚಿ ಸೋಮಶೇಖರ್‌ರೆಡ್ಡಿ, ಸಹ ಕಾರ್ಯದರ್ಶಿ ಎಚ್.ಟಿ. ಕಾಂತರಾಜು ಇದ್ದರು.