ಹುಬ್ಬಳ್ಳಿ : ಬಿಜೆಪಿಯ ಸಂಘಟನೆ ಹಾಗೂ ಯಶಸ್ಸಿನಿಂದ ಆತಂಕಗೊಂಡಿರುವ ಕಾಂಗ್ರೆಸ್ ಮುಖಂಡರು, ಪಾದಯಾತ್ರೆ ಹಾಗೂ ಸಮಾವೇಶಗಳ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಟೀಕಿಸಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆಯಿಂದಾಗಲಿ ಹಾಗೂ ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿ ನಡೆಸಿದ ಸಮಾವೇಶದಿಂದಾಗಲಿ ಬಿಜೆಪಿಗೆ ಯಾವುದೇ ಹಾನಿ ಇಲ್ಲ ಎಂದರು.
ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ನಡೆಸಿದಲ್ಲೆಲ್ಲ ಬಿಜೆಪಿಗೆ ಲಾಭವಾಗಿದೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರು ಇದುವರೆಗೆ ಜನರ ಮಧ್ಯೆ ಹೋದ ಉದಾಹರಣೆಗಳು ಇಲ್ಲ. ಇದೀಗ ಬಿಜೆಪಿಯ ಯಶಸ್ಸಿನಿಂದ ಭಯಭೀತರಾಗಿ ಜನರ ಮಧ್ಯೆ ಹೊರಟಿದ್ದಾರೆ. ಆದರೆ, ಇದರಿಂದ ಕಾಂಗ್ರೆಸ್ಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದರು.
ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದು ಸಂತೋಷ. ಆದರೆ, ಈಗಾಗಲೇ ದಿವಾಳಿಯಾಗಿರುವ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವುದು ಖರ್ಗೆ ಅವರಿಂದಾಗಲಿ ಅಥವಾ ಬೇರೆ ಯಾವುದೇ ಮುಖಂಡರಿಂದಾಗಲಿ ಸಾಧ್ಯವಿಲ್ಲ. ಕರ್ನಾಟಕವೂ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ರಾಜ್ಯದಲ್ಲಿ ಈಗಿನ ಬಿಜೆಪಿ ಸರ್ಕಾರ ಪೂರ್ಣ ಅವಧಿ ಮುಗಿಸಿದ ನಂತರವೇ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು.