ನಾಗಮಂಗಲ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ಅರಣ್ಯ ಇಲಾಖೆಯಿಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಸಿಕ್ಕಿರುವುದು. 
ಜಿಲ್ಲೆ

ಆತಂಕ ಮೂಡಿಸಿದ್ದ ಚಿರತೆ ಸೆರೆ

ನಾಗಮಂಗಲ: ತಾಲೂಕಿನ ದೇವಲಾಪುರ ಹೋಬಳಿಯ ಮುತ್ಸಂದ್ರ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೋಮವಾರ ಒಂದು ವರ್ಷದ ಚಿರತೆ ಬಿದ್ದಿದೆ. ಇದರಿಂದ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ಚಿರತೆಯು ಮುತ್ಸಂದ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರತ್ಯಕ್ಷಗೊಂಡು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು. ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ಕುರಿಯ ಮೇಲೆ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರು ಆತಂಕಗೊಂಡು ಅರಣ್ಯ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮುತ್ಸಂದ್ರ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಬೋನನ್ನು ಇಟ್ಟಿದ್ದರು.

ಬೋನಿಗೆ ಚಿರತೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ತಂಡೋಪತಂಡವಾಗಿ ಸ್ಥಳಕ್ಕೆ ಭೇಟಿ ನೀಡಿ ಚಿರತೆ ಫೋಟೋ ಕ್ಲಿಕ್ಕಿಸಿದರು. ಅಲ್ಲದೆ ವಿಡಿಯೋ ಮಾಡುತ್ತಿದ್ದ ದೃಶ್ಯ ಕಂಡುಬಂತು. ಸೆರೆಯಾದ ಚಿರತೆಯನ್ನು ಪಶು ವೈದ್ಯರಿಂದ ತಪಾಸಣೆ ನಡೆಸಿ ನಂತರ ನಾಗರಹೊಳೆ ಅಭಯಾರಣ್ಯಕ್ಕೆ ಬಿಡಲಾಯಿತು. ಸ್ಥಳದಲ್ಲಿ ಉಪವಲಯ ಅರಣ್ಯಾಧಿಕಾರಿ ಮಂಜು, ಅರಣ್ಯ ರಕ್ಷಕ ರಂಗಸ್ವಾಮಿ ಇದ್ದರು.