ಮುಂಡರಗಿ: ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಶನಿವಾರ ಬೆಳಗ್ಗೆ ಕೊಪ್ಪಳ ತಾಲೂಕಿನ ಹೈದರ್ ನಗರದ ಕರೊನಾ ಶಂಕಿತರಿಬ್ಬರು ಪ್ರತ್ಯಕ್ಷರಾಗಿದ್ದು, ಮಾರುಕಟ್ಟೆಯಲ್ಲಿ ತೀವ್ರ ಆತಂಕ ಮೂಡಿಸಿತು. ಪಟ್ಟಣದ ತರಕಾರಿ ಮಾರುಕಟ್ಟೆಗೆ ತರಕಾರಿ ಖರೀದಿಸುವ ಸಂದರ್ಭದಲ್ಲಿ ಒಬ್ಬ ಯುವಕನ ಕೈಮೇಲೆ ಕರೊನಾ ಕ್ವಾರಂಟೈನ್ ಮುದ್ರೆ ಗಮನಿಸಿದ ವ್ಯಾಪಾರಿ ತಕ್ಷಣ ಹತ್ತಿರದಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಪೊಲೀಸರು ಯುವಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕರೊನಾ ಶಂಕಿತರಿಬ್ಬರೂ ಇತ್ತೀಚೆಗೆ ಗೋವಾದಿಂದ ಆಗಮಿಸಿದ್ದರೆಂದು ತಿಳಿದುಬಂದಿದೆ. ಅವರಿಬ್ಬರಿಗೂ ಮನೆಯಲ್ಲಿಯೇ ಇರಬೇಕು ಎಂದು ವೈದ್ಯರು ಸೂಚಿಸಿರುವುದಾಗಿ ತಿಳಿಸಿದ್ದಾರೆ. ವಿಚಾರಣೆಯ ನಂತರ ಪೊಲೀಸರು ಅವರನ್ನು ಅವರ ಗ್ರಾಮಕ್ಕೆ ಕಳುಹಿಸಿದ್ದಾರೆ.
ಬಡವರಿಗೆ ಆಹಾರ ಸಾಮಗ್ರಿ ವಿತರಣೆ
ಮುಂಡರಗಿ: ಕರೊನಾ ಸೋಂಕು ಹರಡುವುದನ್ನು ತಡೆಯಲು ದೇಶವೇ ಲಾಕ್ಡೌನ್ ಆಗುರುವ ಹಿನ್ನೆಲೆಯಲ್ಲಿ ಪಟ್ಟಣದ ಕೆಲ ಸಾಮಾಜಿಕ ಕಾರ್ಯಕರ್ತರು ದಿನಗೂಲಿ ಕೆಲಸಗಾರರಿಗೆ ಹಾಗೂ ಬಡವರಿಗೆ ಆಹಾರ ಸಾಮಗ್ರಿ ಪೂರೈಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಆರ್ಎಸ್ಎಸ್ ತಾಲೂಕು ಘಟಕದ ವತಿಯಿಂದ ಸಂಚಾಲಕ ಮಂಜುನಾಥ ಇಟಗಿ ಅವರು ಪಟ್ಟಣದ ದಿನಗೂಲಿ ಕೆಲಸ ಮಾಡುವ ರಾಮಪ್ಪ ಬೂದಿಹಾಳ ಸೇರಿ ನಾಲ್ಕು ಕುಟುಂಬಕ್ಕೆ ಅಗತ್ಯ ದಿನಸಿ ಸಾಮಗ್ರಿಗಳನ್ನು ಪೂರೈಸಿದರು. ಸಾಮಾಜಿಕ ಕಾರ್ಯಕರ್ತರಾದ ವಿ.ಎಸ್. ಗಟ್ಟಿ, ಅಡಿವೆಪ್ಪ ಚಲವಾದಿ, ಮಂಜುನಾಥ ಕುಂಬಾರ ಅವರು ಅಲೆಮಾರಿ ಜನಾಂಗದ 17 ಕುಟುಂಬಗಳಿಗೆ ತಲಾ ಎರಡು ಕೆಜಿ ಅಕ್ಕಿಯನ್ನು ಉಚಿತವಾಗಿ ಪೂರೈಸಿದರು. ಸಾಮಾಜಿಕ ಕಾರ್ಯಕರ್ತ ಅಶೋಕ ಸವಣೂರ, ಕನ್ನಡ ಕ್ರಾಂತಿ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಮುಧೋಳ, ರಾಮಚಂದ್ರ ಡೊಣ್ಣಿ, ಅರುಣ ಕಾತರಕಿ, ವಿನೋದ ಮುಧೋಳ, ಇತರರು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಹಾಗೂ ಪೌರಕಾರ್ವಿುಕರಿಗೆ ಉಪಾಹಾರ ವಿತರಿಸಿದರು.
ವೈರಸ್ ತಡೆ ಸಹಕರಿಸಲು ಮನವಿ
ಮುಂಡರಗಿ: ಕರೊನಾ ವೈರಸ್ ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಗಲಿರುಳು ಕೆಲಸ ಮಾಡುತ್ತಿವೆ. ಸಾರ್ವಜನಿಕರು ಮಾತ್ರ ಸರಿಯಾಗಿ ಸ್ಪಂದಿಸುತ್ತಿಲ್ಲ. ಕರೊನಾ ವೈರಸ್ ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು ಎಂದು ಮಾಜಿ ಸಹಕಾರಿ ಸಚಿವ ಎಸ್.ಎಸ್. ಪಾಟೀಲ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೊನಾದಿಂದಾಗಿ ಎಲ್ಲ ರಾಷ್ಟ್ರಗಳು ಸಂಕಷ್ಟ ಸ್ಥಿತಿ ಅನುಭವಿಸುವಂತಾಗಿದೆ. ಮಾನವ ಪ್ರಕೃತಿ ಮತ್ತು ಪರಿಸರದ ವಿರುದ್ಧ ನಡೆದುಕೊಂಡಿರುವುದೇ ಇದಕ್ಕೆಲ್ಲ ಕಾರಣವಾಗಿದೆ. ಎಲ್ಲರೂ ಕರೊನಾ ವಿರುದ್ಧ ಹೋರಾಟಕ್ಕೆ ಸನ್ನದ್ಧರಾಗಬೇಕು ಎಂದು ತಿಳಿಸಿದರು.
ಕರೊನಾ ವೈರಸ್ ತಡೆಗಟ್ಟುವ ಸಲುವಾಗಿ ಗದಗ ಜಿಲ್ಲಾಧಿಕಾರಿ, ಎಸ್ಪಿ, ವೈದ್ಯರು, ತಹಸೀಲ್ದಾರ್, ಸಿಪಿಐ, ಕಂದಾಯ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಮಾಧ್ಯಮ ಪ್ರತಿನಿಧಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಪರಿಹಾರ ನಿಧಿಗೆ ವೈಯುಕ್ತಿಕವಾಗಿ 1ಲಕ್ಷ ರೂ. ಹಣವನ್ನು ತಹಸೀಲ್ದಾರ್ ಮೂಲಕ ನೀಡುವುದಾಗಿ ತಿಳಿಸಿದರು.
EndFragment