ಚಾಮರಾಜನಗರ: ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯನ್ನು ಇಬ್ಬರು ಅಪರಿಚಿತ ಯುವಕರು ಅಪಹರಣಕ್ಕೆ ಪ್ರಯತ್ನ ನಡೆಸಿದ್ದಾರೆಂದು ಆತಂಕ ಮೂಡಿತ್ತು. ಆದರೆ, ಪೊಲೀಸರು ಇದನ್ನು ಕಿಡ್ನಾಪ್ ಪ್ರಯತ್ನವಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ತನ್ನ ಸ್ನೇಹಿತೆಯರೊಂದಿಗೆ ಬುಧವಾರ ಮಧ್ಯಾಹ್ನ ಊಟದ ಸಮಯದಲ್ಲಿ ಹೊರಬಂದಿದ್ದಳು. ಈ ವೇಳೆ ಶಾಲೆಯ ಸಮೀಪ ಟೋಪಿ ಮತ್ತು ಮಾಸ್ಕ್ ಧರಿಸಿದ್ದ ಇಬ್ಬರು ಯುವಕರು ಇದ್ದರು. ಒಬ್ಬ ಯುವಕ ವಿದ್ಯಾರ್ಥಿನಿಯ ಕೈ ಹಿಡಿದುಕೊಂಡು ಎಳೆದಿದ್ದಾನೆ. ವಿದ್ಯಾರ್ಥಿನಿ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ.
ಈ ವಿಷಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು. ಮಕ್ಕಳನ್ನು ಕಿಡ್ನಾಪ್ ಮಾಡಲು ಹೊರಗಿನಿಂದ ಯಾರೋ ಯುವಕರು ಬಂದಿದ್ದರು ಎಂಬ ಅನುಮಾನ ವ್ಯಕ್ತವಾಯಿತು. ವಿಷಯ ತಿಳಿದ ಪೂರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿವಾಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಲಕಿ ಮತ್ತು ಪಾಲಕರಿಂದ ಮಾಹಿತಿ ಪಡೆದುಕೊಂಡರು. ಈ ಕುರಿತು ವಿಜಯವಾಣಿಯೊಂದಿಗೆ ಇನ್ಸ್‌ಪೆಕ್ಟರ್ ದಿವಾಕರ್ ಮಾತನಾಡಿ, ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡುವ ಪ್ರಯತ್ನ ನಡೆದಿಲ್ಲ. ಚಿಕ್ಕ ಮಕ್ಕಳನ್ನು ಸಹಜವಾಗಿ ಮಾತನಾಡಿಸುವಂತೆ ಯುವಕರು ಮಾತನಾಡಿಸಿರಬಹುದು ಎಂದು ಹೇಳಿದ್ದಾರೆ. ಜತೆಗೆ ಕಿಡ್ನಾಪ್ ಪ್ರಯತ್ನವನ್ನು ಅಲ್ಲಗಳೆದಿದ್ದಾರೆ.
ಘಟನೆ ಬಗ್ಗೆ ವಿದ್ಯಾರ್ಥಿನಿಯ ತಂದೆ ಮಾತನಾಡಿ, ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಆದರೆ, ಇಬ್ಬರು ಯುವಕರು ಸಂಚಾರ ಮಾಡಿರುವ ಕಡೆ ಸಿಸಿಟಿವಿ ಕ್ಯಾಮರಾ ಪರಿಶೀಲನೆ ಮಾಡುತ್ತಿದ್ದೇನೆ. ಒಂದು ಸಿಸಿಟಿವಿ ಕ್ಯಾಮರಾದಲ್ಲಿ ಯುವಕರು ಗೋಚರಿಸುತ್ತಾರೆ. ಆದರೆ, ಅವರ ಬೈಕ್ ನಂಬರ್ ಸರಿಯಾಗಿ ಕಾಣುತ್ತಿಲ್ಲ. ಸ್ಪಷ್ಟ ಮಾಹಿತಿ ಕಲೆ ಹಾಕಿ ಪೊಲೀಸರಿಗೆ ತಿಳಿಸುತ್ತೇನೆ ಎಂದಿದ್ದಾರೆ.
ಶಾಲೆಯಲ್ಲಿ ಜಾಗೃತಿ ಕಾರ್ಯಕ್ರಮ: ಬಂಡಿಗೆರೆ ಸರ್ಕಾರಿ ಶಾಲೆಯಲ್ಲಿ ಪೂರ್ವ ಪೊಲೀಸ್ ಠಾಣೆ ವತಿಯಿಂದ ಗುರುವಾರ ಅರಿವು ಕಾರ್ಯಕ್ರಮ ನಡೆಯಿತು.ಈ ವೇಳೆ ಮುಖ್ಯಪೇದೆ ವೆಂಕಟೇಶ್ ಮಾತನಾಡಿ, ಮಕ್ಕಳು ಪಾಲಕರನ್ನು ಗೌರವಿಸಿ. ಏನೇ ಸಮಸ್ಯೆ ಇದ್ದರೂ ತಂದೆ-ತಾಯಿ, ಶಿಕ್ಷಕರೊಂದಿಗೆ ಹೇಳಿಕೊಳ್ಳಿ. ಎಲ್ಲರೂ ಚೆನ್ನಾಗಿ ಓದಿ ಎಂದು ಕಿವಿಮಾತು ಹೇಳಿದರು. ಎಎಸ್‌ಐ ಕೃಷ್ಣಮೂರ್ತಿ, ಗುಪ್ತಚರ ವಿಭಾಗದ ಪೇದೆ ಚಂದ್ರು, ಶಿವಶಂಕರ್, ಶಿಕ್ಷಕ ಮಹದೇವವಸ್ವಾಮಿ ಮತ್ತು ಇತರರು ಇದ್ದರು.