ಜಿಲ್ಲೆ

ಆತಂಕ ತಂದ ಬ್ಯಾಂಕ್ ನೋಟಿಸ್

ಹುಬ್ಬಳ್ಳಿ: ‘ನಿಮ್ಮ ಸಾಲದ ರಕಮು ಬಾಕಿ ಇದ್ದು, 90 ದಿನದೊಳಗೆ ರಿನಿವಲ್ ಮಾಡಿಸಿ ಖಾತೆಯನ್ನು ಚಾಲ್ತಿ ಉಳಿಸಿಕೊಳ್ಳಿ, ಇಲ್ಲದಿದ್ದರೆ 91ನೇ ದಿನಕ್ಕೆ ಖಾತೆ ಸ್ಥಗಿತಗೊಳ್ಳಲಿದೆ.’ ಹೀಗೆಂದು ಬ್ಯಾಂಕ್ ನೋಟಿಸ್ ಬಂದಿದ್ದು, ತಾಲೂಕಿನ ಕೋಳಿವಾಡ ಗ್ರಾಮದ ಅನೇಕ ರೈತರು ಆತಂಕಿತರಾಗಿದ್ದಾರೆ.

ಮೊದಲೇ ಅತಿವೃಷ್ಟಿ, ನೆರೆಯಿಂದಾಗಿ ಬೆಳೆಯನ್ನೆಲ್ಲ ಕಳೆದುಕೊಂಡು ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿರುವ ಸಂದರ್ಭದಲ್ಲಿ ಬ್ಯಾಂಕ್​ನವರು ನೀಡಿರುವ ನೋಟಿಸ್​ನಿಂದ ಹೌಹಾರಿದ್ದಾರೆ.

ಅತ್ತ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಸಾಲ ಮನ್ನಾ ಯೋಜನೆಯೂ ಅನೇಕ ರೈತರಿಗೆ ಅನ್ವಯ ಆಗಿಲ್ಲ. ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿ ಕಳೆದ ವರ್ಷದವರೆಗೂ ಬೆಳೆಸಾಲ ಖಾತೆ ಚಾಲ್ತಿ ಇಟ್ಟುಕೊಂಡವರಿಗೆ ಯೋಜನೆಯ ಪ್ರೋತ್ಸಾಹ ಧನವೂ ಬಂದಿಲ್ಲ. ಹೀಗಾಗಿ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ.

ಈ ವರ್ಷ ಬೆಳೆವಿಮೆ, ನೆರೆ ಪರಿಹಾರ ಎಂದು ಜೀವ ಉಳಿಸಿಕೊಳ್ಳಲು ಒಂದಿಷ್ಟು ಹಣ ಬ್ಯಾಂಕ್ ಖಾತೆಗೆ ಬಂದು ಸೇರಿದೆ. ಕೈಸಾಲ ಮರುಪಾವತಿ, ಮನೆ ಖರ್ಚು ಸೇರಿ ಬಳಸಿಕೊಳ್ಳೋಣ ಎನ್ನುವಾಗಲೇ ಬ್ಯಾಂಕ್​ನವರು ಸಾಲ ಖಾತೆ ರಿನಿವಲ್ ಮಾಡಿಕೊಳ್ಳಿ ಎಂದರೆ ಎಲ್ಲಿಗೆ ಹೋಗೋಣ? ಎಂಬುದು ಕೃಷಿಕರ ಅಳಲು. ಖಾತೆ ರಿನಿವಲ್ ಎಂದರೆ ಸಾಲ ಬಾಕಿ ಹಣ ಪಾವತಿಸುವುದೇ ಆಗಿರುತ್ತದೆ. ಪರಿಹಾರದ ಹಣ ಸಾಲ ಪಾವತಿಗೆ ಕೊಟ್ಟರೆ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳಬೇಕೆ? ಎಂದು ತಾಲೂಕಿನ ಕೋಳಿವಾಡದ ವಿಜಯ ಬ್ಯಾಂಕ್​ನಿಂದ ನೋಟಿಸ್ ಪಡೆದಿರುವ ರೈತರು ಪ್ರಶ್ನಿಸುತ್ತಿದ್ದಾರೆ.

ಕಾಲಮಿತಿಯೊಳಗೆ ರಿನಿವಲ್ ಮಾಡದಿದ್ದರೆ ಖಾತೆ ಸ್ಥಗಿತಗೊಳ್ಳಲಿದೆ. ಆ ಖಾತೆಯಲ್ಲಿರುವ ಹಣ ತೆಗೆಯಲು ಬರುವುದಿಲ್ಲ. ಯಾವುದೇ ವ್ಯವಹಾರ ಸಹ ಅದರ ಮೇಲೆ ನಡೆಯುವುದಿಲ್ಲ. ಅಂತಹ ರೈತರು ಬ್ಯಾಂಕ್​ಗೆ ಹೋಗಿ ಮತ್ತೆ ಮನವಿ ಮಾಡಿ ಲಾಕ್ ತೆಗೆಸಬೇಕಾಗುತ್ತದೆ. ಒಟ್ಟಾರೆ ಅನ್ನದಾತನಿಗೆ ನೆಮ್ಮದಿ ಸಿಗದಂತಹ ಪರಿಸ್ಥಿತಿ ನಿರ್ವಣವಾಗಿದೆ ಎಂಬುದು ರೈತರ ದೂರು.

ಸಾಲ ಮರುಪಾವತಿಸುವಂತೆ ಬ್ಯಾಂಕ್​ಗಳಿಂದ ಯಾವುದೇ ಲೀಗಲ್ ನೋಟಿಸ್ ರೈತರಿಗೆ ಹೋಗುತ್ತಿಲ್ಲ. ಆದರೆ, ತಮ್ಮ ಸಾಲದ ಬಗ್ಗೆ ಮಾಹಿತಿಯನ್ನು ರೈತರು ಕೇಳುತ್ತಿರುವುದರಿಂದ ಕೆಲ ಬ್ಯಾಂಕ್​ಗಳು ಮಾಹಿತಿ ಒದಗಿಸಿರಬಹುದು ಅಷ್ಟೆ. | ಈಶ್ವರನಾಥ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ, ಧಾರವಾಡ