ಜಿಲ್ಲೆ

ಆಣೆ, ಪ್ರಮಾಣ ಮಾಡಿ ಮೋಸ

Shivamogga

ಹೊಸನಗರ: ತಮ್ಮ ಸದಸ್ಯತ್ವ ಉಳಿಸಿಕೊಳ್ಳಲು ಮತ ನೀಡುತ್ತೇವೆ ಎಂದು ಆಣೆ ಪ್ರಮಾಣ ಮಾಡಿದ್ದ ಬಿಜೆಪಿ ಸದಸ್ಯರು ಕೊನೆಗೂ ಮೋಸ ಮಾಡಿದರು ಎಂದು ತಾಪಂ ಸದಸ್ಯ ಬಿ.ಜಿ.ಚಂದ್ರಮೌಳಿ ಗೌಡ ತಿಳಿಸಿದರು.

ಈ ಹಿಂದೆ ಪ್ರಥಮ ಅವಧಿಯ ಅಧ್ಯಕ್ಷರ ಚುನಾವಣೆಯಲ್ಲಿ ದ್ವಿಸದಸ್ಯತ್ವ ಹೊಂದಿದ್ದ ಬಿಜೆಪಿ ಸದಸ್ಯರಾದ ರುಕ್ಮಿಣಿ ಮತ್ತು ಅಶ್ವಿನಿ ವಿರುದ್ಧ ಹೈಕೋರ್ಟ್ ಮೊರೆ ಹೋಗಿ ಅನರ್ಹತೆ ಆದೇಶ ತರಲಾಗಿತ್ತು. ಅನರ್ಹತೆಗೆ ಸುಳಿಗೆ ಸಿಲುಕಿದ ಈ ಸದಸ್ಯರು ತಮ್ಮ ಸದಸ್ಯತ್ವ ಉಳಿಸಿಕೊಡುವಂತೆ ದುಂಬಾಲು ಬಿದ್ದಿದ್ದರು. ನೀವು ಅಧ್ಯಕ್ಷರಾಗುವ ವೇಳೆ ಪರವಾಗಿ ಮತ ಹಾಕುತ್ತೇವೆ ಎಂದು ಸಿಗಂದೂರು ದೇಗುಲದಲ್ಲಿ ಆಣೆ ಪ್ರಮಾಣದ ವಾಗ್ದಾನ ಮಾಡಿದ್ದರು. ನಂತರ ಬೆಳವಣಿಗೆಯಲ್ಲಿ ಶನಿವಾರ ಅಧ್ಯಕ್ಷ ಚುನಾವಣೆ ವೇಳೆ ಈ ಸದಸ್ಯರು ಕೊಟ್ಟ ಮಾತಿನಂತೆ ನಡೆಯದೆ ಎರಡು ಬಗೆದರು ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಇವರು ಮಾಡಿದ ಆಣೆ ಪ್ರಮಾಣ ನಂಬಿ ನಾನು ಇವರ ಸಂಕಷ್ಟಕ್ಕೆ ಸ್ಪಂದಿಸಿದ್ದೇನೆ. ಮಾನವೀಯತೆಯಲ್ಲಿ ಇವರ ಕಷ್ಟ ಕಾಲದಲ್ಲಿ ಸಹಾಯ ನೀಡಿದ್ದೇನೆ. ಕೊಟ್ಟ ವಾಗ್ದಾನ ಮತ್ತು ಸಹಕಾರ ಎಲ್ಲವನ್ನು ಮರೆತು ನಂಬಿಕೆ ದ್ರೋಹ ಮಾಡಿದ್ದಾರೆ. ದೇವರು, ಧರ್ಮ ಎನ್ನುವ ಬಿಜೆಪಿ ಕೊನೆಗೂ ತನ್ನ ಅಸಲಿತನ ಪ್ರದರ್ಶಿಸಿದೆ ಎಂದು ದೂರಿದರು.

ಮಾಜಿ ಅಧ್ಯಕ್ಷ ವಾಸಪ್ಪಗೌಡ ಕೂಡ ಕಾಂಗ್ರೆಸ್ ಜತೆ ಇರುತ್ತೇನೆ ಎಂದು ನಂಬಿಸಿ ಎಲ್ಲ ಅಧಿಕಾರ, ಸವಲತ್ತು ಪಡೆದು ಮೋಸ ಮಾಡಿದರು. ಕಾಂಗ್ರೆಸ್ ಸಖ್ಯಕ್ಕೆ ಬಂದ ಇವರನ್ನು ಮೊದಲು ಅಧ್ಯಕ್ಷರಾಗಿ ಮಾಡಲಾಗಿತ್ತು. ಕೆಲ ತಿಂಗಳು ಬಾಕಿ ಇರುವಾಗ ಪಕ್ಷದ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದರು. ಜೀವ ಇರುವವರೆಗೂ ಕಾಂಗ್ರೆಸ್ ಜತೆ ಇರುತ್ತೇನೆ ಎಂದು ನಂಬಿಸಿ ಬೆನ್ನಿಗೆ ಚೂರಿ ಹಾಕಿದರು ಎಂದು ಅಕ್ರೋಶ ವ್ಯಕ್ತಪಡಿಸಿದರು.