ಜಿಲ್ಲೆ

ಆಡಿಟ್ ವ್ಯವಸ್ಥೆ ಅನುಷ್ಠಾನಕ್ಕೆ ಡೆಡ್‌ಲೈನ್

ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕೃಷಿಪತ್ತಿನ ಸಹಕಾರ ಸಂಘಗಳಲ್ಲಿ ಜು.31ರೊಳಗೆ ಗಣಕೀಕೃತ ಆಡಿಟ್ ವ್ಯವಸ್ಥೆ ರೂಪಿಸಿ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತಕ್ಕೆ ಮುನ್ನುಡಿ ಬರೆಯಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಗಣಕೀಕೃತ ಆಡಿಟ್ ವ್ಯವಸ್ಥೆ ಅನುಷ್ಠಾನದ ಗುತ್ತಿಗೆ ಪಡೆದಿರುವ ವಿ-ಸಾಫ್ಟ್ ಸಂಸ್ಥೆ ಅಧಿಕಾರಿಗಳೊಂದಿಗೆ ಶುಕ್ರವಾರ ಆನ್‌ಲೈನ್ ಸಭೆ ನಡೆಸಿ, ಗಣಕೀಕೃತ ಆಡಿಟ್ ವ್ಯವಸ್ಥೆ ಜಾರಿ ನನ್ನ ಕನಸು ಹಾಗೂ ಆಡಳಿತ ಮಂಡಳಿಯ ಸಂಕಲ್ಪವೂ ಆಗಿದೆ. ಇದಕ್ಕೆ ಎರಡೂ ಜಿಲ್ಲೆಯ ಎಲ್ಲ 188 ಕೃಷಿಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ಸಿಇಒಗಳು ಸಹಕಾರ ನೀಡಬೇಕು ಎಂದು ತಾಕೀತು ಮಾಡಿದರು.

ಸಹಕಾರಿ ವ್ಯವಸ್ಥೆ ಕುರಿತು ನಂಬಿಕೆ ಮತ್ತಷ್ಟು ಬಲಗೊಳ್ಳಲು ಗಣಕೀಕೃತ ಆಡಿಟ್ ಮುಖ್ಯ. ಇದರಿಂದ ಗ್ರಾಹಕರಲ್ಲಿ ಮತ್ತಷ್ಟು ವಿಶ್ವಾಸ ವೃದ್ಧಿಸುವ ಜತೆಗೆ ಅಂದಿನ ವಹಿವಾಟಿನ ಲೆಕ್ಕ ಅಂದೇ ಆನ್‌ಲೈನ್‌ನಲ್ಲಿ ದಾಖಲಾಗುವುದರಿಂದ ಆರ್ಥಿಕ ಅಪರಾಧ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತಾಗುತ್ತದೆ. ದೇಶದಲ್ಲೇ ಮಾದರಿ ವ್ಯವಸ್ಥೆಯಾಗಿಸುವ ನಮ್ಮ ಪ್ರಯತ್ನಕ್ಕೆ ಸ್ಪಂದಿಸಿ ಕೆಲಸ ಮಾಡಿ ಎಂದರು.

ಗಣಕೀಕೃತ ಆಡಿಟ್ ಅನುಷ್ಠಾನಗೊಳಿಸುವ ಕಾರ್ಯದ ಗುತ್ತಿಗೆ ಪಡೆದಿರುವ ವಿ-ಸಾಫ್ಟ್ ಸಂಸ್ಥೆ ಈ ಕಾರ್ಯದಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಜುಲೈ 31ರೊಳಗೆ ಪ್ರಕ್ರಿಯೆ ಮುಗಿಸಲು ಕ್ರಮವಹಿಸಿ, ಪ್ರತಿ 15 ಸೊಸೈಟಿಗಳಿಗೆ ಒಬ್ಬ ಸಿಬ್ಬಂದಿ ನೇಮಿಸಿ ಡೇಟಾ ಎಂಟ್ರಿ ಮಾಡಿ ಮುಗಿಸಿ ಎಂದರು.

ಡಿಸಿಸಿ ಬ್ಯಾಂಕ್ ಎಜಿಎಂ ಶಿವಕುಮಾರ್ ಮಾತನಾಡಿ, ಗಣಕೀಕೃತ ಆಡಿಟ್ ಅನುಷ್ಠಾನಕ್ಕೆ ಕೋಲಾರದ ಹುತ್ತೂರು, ಕಸಬಾ ದಕ್ಷಿಣ, ಅರಹಳ್ಳಿ ಸೊಸೈಟಿ, ಮಾಲೂರಿನ ಟೇಕಲ್, ದಿನ್ನಹಳ್ಳಿ, ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್, ಬಂಗಾರಪೇಟೆಯ ಹುದುಕುಳ, ಚಿಂತಾಮಣಿ ತಾಲೂಕಿನ ಯಗವಕೋಟೆ, ಟಿ.ಗೊಲ್ಲಹಳ್ಳಿ, ನಂದಿಗಾನಹಳ್ಳಿ, ಚಿಕ್ಕಬಳ್ಳಾಪುರ ಕಸಬಾ ಕೃಷಿ ಪತ್ತಿನ ಸಹಕಾರ ಸಂಘಗಳು ಗಣಕೀಕೃತ ಆಡಿಟ್ ಅನುಷ್ಠಾನದಲ್ಲಿ ಹಿಂದಿವೆ ಎಂದರು.

ಬಾಗೇಪಲ್ಲಿಯ ಯಲ್ಲಂಪಲ್ಲಿ, ಚೇಳೂರು, ಡಿ.ಕೊತ್ತಪಲ್ಲಿ, ನಲ್ಲಪ್ಪರೆಡ್ಡಿಪಲ್ಲಿ, ಕುರುಬರಹಳ್ಳಿ, ಗುಡಿಬಂಡೆಯ ಸೋಮೇನಹಳ್ಳಿ, ಪಸುಪಲೋಡು, ಗೌರಿಬಿದನೂರು ತಾಲೂಕಿನ ಬಿ.ಬೊಮ್ಮಸಂದ್ರ, ಕಾಟನಕಲ್ಲು, ಬೇವಿನಹಳ್ಳಿ, ನಗರಗೆರೆ, ನಾಮಗೊಂಡ್ಲು, ಕಡಬೂರು ವ್ಯವಸಹಾ ಸೇವಾ ಸಹಕಾರ ಸಂಘಗಳ ಆಡಳಿತ ಮಂಡಳಿಗಳು ಗಣಕೀಕೃತ ಆಡಿಟ್ ಅನುಷ್ಠಾನಕ್ಕೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಡಿಸಿಸಿ ಬ್ಯಾಂಕಿನ ತಾಂತ್ರಿಕ ಸಹಾಯಕ ಹ್ಯಾರಿಸ್, ವಿ-ಸಾಫ್ಟ್ ಸಂಸ್ಥೆಯ ಅಧಿಕಾರಿಗಳಾದ ವಿಶ್ವ, ಸತೀಶ್ ಮತ್ತಿತರರಿದ್ದರು.

ಅವಿಭಜಿತ ಜಿಲ್ಲೆಯ 188 ್ಯಾಕ್ಸ್‌ಗಳ ಪೈಕಿ 21 ಸೊಸೈಟಿಗಳ ಗಣಕೀಕೃತ ಆಡಿಟ್ ಅನುಷ್ಠಾನ ಮುಗಿದಿದೆ. 41 ಸೊಸೈಟಿಗಳಲ್ಲಿ ಮುಕ್ತಾಯದ ಹಂತದಲ್ಲಿದೆ. 26 ಸೊಸೈಟಿಗಳು ಈ ಕಾರ್ಯಕ್ಕೆ ಸ್ಪಂದಿಸುತ್ತಿಲ್ಲ. ಗಣಕೀಕೃತ ಆಡಿಟ್ ಅನುಷ್ಠಾನಗೊಳಿಸದಿದ್ದರೆ ಡಿಸಿಸಿ ಬ್ಯಾಂಕಿನಿಂದ ಸಾಲಸೌಲಭ್ಯ ನೀಡುವುದಿಲ್ಲ. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ