ಕಂಪ್ಲಿ: ಪಟ್ಟಣದ ಪುರಸಭೆಗೆ ಆಡಳಿತಾಧಿಕಾರಿ ನೇಮಕಕ್ಕೆ ನ.4ರವರೆಗೆ ತಡೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ನ.6ಕ್ಕೆ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲಿದೆ.
ಪುರಸಭೆ ಸದಸ್ಯರ ಅಧಿಕಾರ ಅವಧಿ 60 ತಿಂಗಳಿದ್ದು, ಪೂರ್ಣಗೊಳಿಸಲು ಅನುವು ಮಾಡಿಕೊಡುವಂತೆ ಅಧ್ಯಕ್ಷ ಸೇರಿದಂತೆ 23 ಸದಸ್ಯರು ಧಾರವಾಡ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ.6ಕ್ಕೆ ಪುರಸಭೆ ಸದಸ್ಯರ ಅವಧಿ ಮುಗಿಯಲಿರುವ ಹಿನ್ನೆಲೆಯಲ್ಲಿ ಸರ್ಕಾರ ಆಡಳಿತಾಧಿಕಾರಿ ನೇಮಕಕ್ಕೆ ಮುಂದಾಗಿತ್ತು.
ಆದರೆ, ಪೌರಾಡಳಿತ ಕಾಯ್ದೆಯಂತೆ 30 ತಿಂಗಳ ಎರಡು ಅವಧಿ ಅಧಿಕಾರ ದೊರೆಯಬೇಕಿದೆ. ಮೊದಲ 30 ತಿಂಗಳು ಆಡಳಿತ ನಡೆಸಿದ್ದು, ಎರಡನೇ ಅವದಿಯಲ್ಲೂ 30 ತಿಂಗಳ ಆಡಳಿತಕ್ಕೆ ಅವಕಾಶ ನೀಡಬೇಕೆಂದು ನ್ಯಾಯಾಲಯವನ್ನು ಕೋರಲಾಗಿತ್ತು. 2019ರ ನವೆಂಬರ್ 12ರಂದು ಪುರಸಭೆ ಸದಸ್ಯರ ಚುನಾವಣೆ ನಡೆದಿದ್ದು, ನ.14ರಂದು ಫಲಿತಾಂಶ ಪ್ರಕಟವಾಗಿದೆ.
2020ರ ನ.6ರಂದು ಮೊದಲ ಅವಧಿ ಆರಂಭಗೊಂಡು 2023ರ ಮಾ.10ರಂದು ಅವಧಿಯ ಕೊನೆಯ ಸಭೆ ನಡೆದಿತ್ತು. ಬಳಿಕ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ 2023ರ ಮೇ 17ರಂದು ಎಸಿ, ಪುರಸಭೆ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಧ್ಯಕ್ಷ-ಉಪಾಧ್ಯಕ್ಷ ಮೀಸಲು ಗೊಂದಲಿನಿಂದಾಗಿ 2025ರ ಜ.22ರತನಕ ಸದಸ್ಯರಿಗೆ ಆಡಳಿತಕ್ಕೆ ಅವಕಾಶ ದೊರೆತಿರಲಿಲ್ಲ.
2025ರ ಜ.23ರಂದು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದು ಎರಡನೇ ಆವಧಿ ಆರಂಭಗೊಂಡಿದೆ/ 2 ವರ್ಷ 6 ತಿಂಗಳು ಅಧಿಕಾರ ನಡೆಸಬೇಕಿರುವುದರಿಂದ 2027ರ ಜು.22ಕ್ಕೆ ಎರಡನೇ ಅಧಿಕಾರ ಅವಧಿ ಮುಕ್ತಾಯಗೊಳ್ಳಬೇಕು ಎಂಬುದು ಸದಸ್ಯರ ವಾದವಾಗಿದೆ.