ಜಿಲ್ಲೆ

ಆಡಳಿತದಲ್ಲಿ ಕನ್ನಡ ಕಡ್ಡಾಯ ಭಾಷಾ ಬೆಳವಣಿಗೆಗೆ ನಾಂದಿ

ಗೋಣಿಕೊಪ್ಪ: ರಾಜ್ಯ ಸರ್ಕಾರದ ಆಡಳಿತದಲ್ಲಿ ಕನ್ನಡ ಭಾಷೆ ಕಡ್ಡಾಯ ಬಳಕೆ ಕಾನೂನು ರೂಪಿಸಿರುವುದು ಭವಿಷ್ಯದಲ್ಲಿ ಕನ್ನಡ ಬೆಳವಣಿಗೆಗೆ ನಾಂದಿಯಾಗಲಿದೆ ಎಂದು ಹೇಳಿದರು. ಕಾಯ್ದೆಗೆ ರಾಜ್ಯಪಾಲರ ಒಪ್ಪಿಗೆ ಉಚ್ಚ ನ್ಯಾಯಾಲಯ ಒಪ್ಪಿಗೆ ಕೂಡ ದೊರೆತಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.
ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಿರುವ ಡಾ.ಪಿ.ಎಂ.ನಾಣಮಯ್ಯ ಸಭಾ ಮಂಟಪ, ಐ.ಮಾ. ಮುತ್ತಣ್ಣ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ 16ನೇ ವರ್ಷದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಲು ಸರ್ಕಾರ ನಿಯಮ ರೂಪಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೂಡ ಕನ್ನಡ ಭಾಷೆ ಬಳಕೆಗೆ ಅಂಕ ನೀಡುವ ಕುರಿತು ಚರ್ಚಿಸಲಾಗುತ್ತಿದೆ. ಕೇರಳ ಗಡಿ ಭಾಗದವರು ಜಿಲ್ಲೆಯಲ್ಲಿ ನಾನಾ ವೃತ್ತಿಯಲ್ಲಿ ತೊಡಗಿಕೊಂಡಿದ್ದರೂ ಕನ್ನಡದ ಅಭಿಮಾನ ಅವರಲ್ಲಿಯೂ ಕಾಣುತ್ತಿದೆ. ಕೊಡಗಿನ ಹಿರಿಯ ಚೇತನಗಳು ಸಾಹಿತ್ಯ, ಸಂಸ್ಕೃತಿ ಮೂಲಕ ಕನ್ನಡ ಪೋಷಣೆಯ ಜವಬ್ದಾರಿ ನಿಭಾಯಿಸಿದ್ದಾರೆ. ಎಲ್ಲರು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕಿದೆ ಎಂದರು.
ಕಸಾಪ ನಿಕಟಪೂರ್ವ ರಾಜ್ಯಾಧ್ಯಕ್ಷ ನಾಡೋಜ. ಡಾ. ಮನುಬಳಿಗಾರ್ ಮಾತನಾಡಿ, ಕೊಡಗಿನ ಭೌಗೋಳಿಕ ಹಿನ್ನೆಲೆ, ಕೃಷಿ, ಸಂಸ್ಕೃತಿ, ಭಾಷೆ, ಕಲೆ ಮತ್ತಷ್ಟು ಬೆಳವಣಿಗೆಗೆ ಕಾರ್ಯಕ್ರಮಗಳು ಸಹಾಯವಾಗಲಿದೆ. ಸಮಾವೇಶಗಳು ಹೆಚ್ಚು ಸರ್ಕಾರದ ಮಟ್ಟದಲ್ಲಿ ನಡೆಯಬೇಕಿದೆ. ರಾಜ್ಯ ಸರ್ಕಾರ ಕೂಡ ಹೆಚ್ಚುವರಿ ಅನುದಾನದ ಮೂಲಕ ಬೆಂಬಲ ನೀಡುತ್ತಿದೆ. ಇದರ ಸದುಪಯೋಗವಾಗಬೇಕಿದೆ ಎಂದರು.
ಸ್ಮರಣ ಸಂಚಿಕೆ ಮುಖಪುಟವನ್ನು ಅರಮೇರಿ ಕಳಂಚೇರಿ ಮಠದ ಅಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಬಿಡುಗಡೆ ಮಾಡಿದರು. ಈ ಸಂದರ್ಭ ಸಂಚಿಕೆ ಸಂಪಾದಕ ಕೆ. ಬಿ. ಜಗದೀಶ್ ಜೋಡುಬೀಟಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಮಂಡೇಪಂಡ ಗೀತಾ ಮಂದಣ್ಣ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್. ಪಿ. ಚಂದ್ರಶೇಖರ್, ಖಜಾಂಚಿ ಎಂ. ಬಿ. ಜೋಯಪ್ಪ, ಕಾರ್ಯದರ್ಶಿ ಎಸ್. ಐ. ಮುನೀರ್, ಪುದಿನೆರವನ ರೇವತಿ ರಮೇಶ್, ಕಸಾಪ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಕುಶಾಲನಗರ ಅಧ್ಯಕ್ಷ ಕೆ. ಎಸ್. ಮೂರ್ತಿ, ವಿರಾಜಪೇಟೆ ಅಧ್ಯಕ್ಷ ರಾಜೇಶ್ ಪದ್ಮನಾಭ, ಸೋಮವಾರಪೇಟೆ ಅಧ್ಯಕ್ಷ ಎಸ್. ಡಿ. ವಿಜೇತ್, ಮಡಿಕೇರಿ ಅಧ್ಯಕ್ಷ ಅಂಬೆಕಲ್ ನವೀನ್, ಪೊನ್ನಂಪೇಟೆ ತಾಲೂಕು ನಿಕಟಪೂರ್ವ ಅಧ್ಯಕ್ಷ ಡಾ. ಚಂದ್ರಶೇಕರ್ ಇದ್ದರು.