ಹಾಸನ : ರಾಜ್ಯದ ಆಡಳಿತ ನಡೆಸುವ ಮಹಾನುಭಾವರೇ ಕಮಿಷನ್ ದಂಧೆಯನ್ನು ರಾಜಾರೋಷವಾಗಿ ನಡೆಸುತ್ತಿದ್ದು, ಇಂತವರಿಂದ ಯಾವ ರೀತಿಯ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಗಡೆ ಪ್ರಶ್ನಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬ್ರಿಲಿಯೆಂಟ್ ಪಿಯು ಕಾಲೇಜು ವತಿಯಿಂದ ಬುಧವಾರ ಆಯೋಜಿಸಿದ್ದ ದಶಮಾನೋತ್ಸವ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪದಡಿ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಅದ್ದೂರಿಯಾಗಿ ಸ್ವಾಗತಿಸುವ ಮಟ್ಟಕ್ಕೆ ಸಮಾಜ ಬಂದು ನಿಂತಿದೆ. ಆ ವ್ಯಕ್ತಿ ರಾಜಕೀಯವಾಗಿ ಬಲಾಢ್ಯ ಆಗಿದ್ದಾರೆ ಎಂಬ ಮಾತ್ರಕ್ಕೆ ಅವರಿಗೆ ಆ ರೀತಿಯ ಸ್ಥಾನಮಾನ ನೀಡುವುದು ದೊಡ್ಡ ತಪ್ಪು ಎಂದರು.
ಭ್ರಷ್ಟಾಚಾರದಿಂದ ಸಂಪಾದಿಸಿದ ಹಣದಿಂದ ಮನುಷ್ಯ ನೆಮ್ಮದಿಯ ಬದುಕು ನಡೆಸಲು ಸಾಧ್ಯವಿಲ್ಲ. ಐಷಾರಾಮಿ ಜೀವನ ಬಯಸುವ ಬದಲು ಇರುವುದರಲ್ಲೇ ಬದುಕುವುದನ್ನು ರೂಢಿಸಿಕೊಳ್ಳಬೇಕು. ನ್ಯಾಯಯುತ ಮಾರ್ಗದಲ್ಲಿ ಸಂಪಾದನೆಗೆ ಒತ್ತು ನೀಡಬೇಕು.
ತೃಪ್ತಿ ಮತ್ತು ಮೌಲ್ಯಗಳಿದ್ದರೆ ಮಾತ್ರ ಜೀವನದಲ್ಲಿ ಸಂತೋಷವಾಗಿರಲು ಸಾಧ್ಯ. ನಾನು ಲೋಕಾಯುಕ್ತಕ್ಕೆ ಬರುವವರೆಗೆ ಸಮಾಜದಲ್ಲಿ ಆಗುವ ಅನ್ಯಾಯದ ಬಗ್ಗೆ ಅಷ್ಟೊಂದು ಅರಿವು ಇರಲಿಲ್ಲ. ಸಮಾಜದಲ್ಲಿ ಭ್ರಷ್ಟಾಚಾರ ಯಾವ ರೀತಿ ತಾಂಡವವಾಡುತ್ತಿದೆ ಎಂಬುದು ಅಲ್ಲಿಗೆ ಸೇರಿದ ಬಳಿಕ ಅರಿವಾಯಿತು ಎಂದು ಹೇಳಿದರು.
ಈ ರೀತಿ ಏಕೆ ಆಗುತ್ತಿದೆ ಎಂದು ನನ್ನಲ್ಲೆ ಚರ್ಚೆ ಮಾಡಿದಾಗ ಇದು ವ್ಯಕ್ತಿಗಳ ತಪ್ಪಲ್ಲ. ಸಮಾಜದ ತಪ್ಪು ಎಂದು ಗೊತ್ತಾಯಿತು. ಹಿಂದಿನ ದಿನಗಳಲ್ಲಿ ಗ್ರಾಮದೊಳಗೆ ಯಾರಾದರೂ ಜೈಲಿಗೆ ಹೋಗಿದ್ದರೇ ಆ ಮನೆ ಹತ್ತಿರ ನೀನು ಹೋಗಬೇಡ ಎಂದು ಪೋಷಕರು ಹೇಳುತ್ತಿದ್ದರು. ಅಂದಿನ ಸಮಾಜ ಸಾಮಾಜಿಕವಾಗಿ ತಪ್ಪು ಮಾಡಿದವರನ್ನು ಬಹಿಷ್ಕರಿಸುತ್ತಿದ್ದರು. ಇದರಿಂದಲೇ ಅಂದು ಜನರು ತಪ್ಪು ಮಾಡಲು ಹೆದರುತ್ತಿದ್ದರು. ತಪ್ಪು ಮಾಡುವವರು ಇದ್ದರೂ ಕೂಡ ಸಂಖ್ಯೆ ಬಹಳ ಕಡಿಮೆ ಇತ್ತು. ಆದರೇ ಪ್ರಸ್ತುತ ಸಮಾಜದಲ್ಲಿ ಜನರ ಭಾವನೆ ನೋಡಿದರೇ ಶ್ರೀಮಂತಿಕೆ, ಅಧಿಕಾರ ಪೂಜಿಸುವಂತಹ ಸಮಾಜದಲ್ಲಿದ್ದೇವೆ. ಈ ಸಮಾಜದ ಬದಲಾವಣೆ ಆಗದೇ ಶಾಂತಿ, ನೆಮ್ಮದಿ ಸಿಗಲು ಸಾಧ್ಯವಿಲ್ಲ. ಮೊದಲು ಸಮಾಜದ ಬದಲಾವಣೆ ಆದರೇ ಮಾತ್ರ ಜನರು ಕೂಡ ತಮ್ಮ ಭಾವನೆಯನ್ನು ಬದಲಾಯಿಸಬಹುದು ಎಂದು ಅಭಿಪ್ರಾಯಪಟ್ಟರು.
ಇಂದು ಜೈಲಿಗೆ ಹೋಗಿ ಜಾಮೀನು ತೆಗೆದುಕೊಂಡು ಬರುವಂತಹ ವ್ಯಕ್ತಿಗಳಿಗೆ ಸ್ವಾಗತ ಮಾಡಲು ನೂರಾರು ಜನರು ಏರ್ಪೋಟ್, ರೈಲ್ವೆ ನಿಲ್ದಾಣಕ್ಕೆ, ಜೈಲಿಗೆ ಗೇಟ್ ಬಳಿ ಹೋಗಿ ಹಾರ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಇನ್ನು ಜಾಮೀನುನಲ್ಲಿರುವವರು ಎಷ್ಟೊ ಜನ ಅಧಿಕಾರದಲ್ಲಿ ಇದ್ದಾರೆ ಎಂದು ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಮಾತನಾಡಿದ ಅವರು, ಜಾಮಿನು ಪಡೆದವರು ಚುನಾವಣೆಯಲ್ಲಿ ನಿಲ್ಲುತ್ತಾರೆ. ಹಿಂದೆ ಇದ್ದಂತಹ ಸಮಾಜಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಆಗದಿದ್ದರೇ ಈ ಸಮಾಜದಲ್ಲಿ ಶಾಂತಿ, ನೆಮ್ಮದಿ ಸಿಗಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂದಿನ ಪರಿಸ್ಥಿತಿಗೆ ಮೂಲಕ ಕಾರಣ ದುರಾಸೆ ಎನ್ನುವುದು. ಇಂದಿನ ಪರಿಸ್ಥಿತಿಯಲ್ಲಿ ಸಾವಿರಾರು ಹಗರಣಗಳು ನಡೆಯುತ್ತಿದೆ. ಹೊರದೇಶದಿಂದ ನಮ್ಮ ಯೋಧರಿಗೆ ಆಯುಧವನ್ನು ಖರೀದಿ ಮಾಡುವ ಗುತ್ತಿಗೆಯಲ್ಲಿ 64 ಕೋಟಿ ರೂ. ಕೊಳ್ಳೆ ಹೊಡೆದಿದ್ದಾರೆ. ಕಾಮನ್ ವೆಲ್ತ್ ಗೇಮ್ ಬಂದಾಗ 70 ಸಾವಿರ ಕೋಟಿ ರೂ. ದೇಶಕ್ಕೆ ಅನ್ಯಾಯವಾಗಿದೆ. ಇದಾದ ಮೇಲೆ 2ಜೀ ಹಗರಣದಲ್ಲಿ ದೇಶಕ್ಕೆ 1 ಲಕ್ಷದ 76 ಸಾವಿರ ಕೋಟಿ ರೂಗಳು ನಷ್ಟವಾಗಿದೆ. ಇದಾದ ನಂತರ ಕೂಲ್ಗೆಟ್ ನಿಂದ 1 ಲಕ್ಷದ 86 ಸಾವಿರ ಕೋಟಿ ರೂಗಳು. ಇಷ್ಟೊಂದು ಹಗರಣ ಒಂದು ವರ್ಷದಲ್ಲಿ ನಡೆದರೇ ಯಾವ ರೀತಿ ದೇಶ ಅಭಿವೃದ್ಧಿಯಾಗುತ್ತದೆ ಎಂದರು.
ಈ ದುರಾಸೆಗೆ ಇಲ್ಲಿ ಯಾವ ಮದ್ದು ಇಲ್ಲ. ದುರಾಸೆಗೆ ಒಳಗಾದವರು ಯಾವ ಕಾನೂನಿಗೆ ಹೆದರುವುದಿಲ್ಲ. ನನ್ನ ಅನಿಸಿಕೆಯಲ್ಲಿ ದುರಾಸೆಗೆ ಒಂದೆ ಒಂದು ಮದ್ದು ಇದ್ದು, ಹಿರಿಯರು ಕಟ್ಟಿದಂತಹ ಮೌಲ್ಯ ಮತ್ತು ತೃಪ್ತಿ ಇರಬೇಕು. ತೃಪ್ತಿ ಇದ್ದರೇ ದುರಾಸೆ ಬರುವುದಿಲ್ಲ. ದುರಾಸೆ ಇದ್ದರೇ ತೃಪ್ತಿ ಇರುವುದಿಲ್ಲ. ಆದರೇ ಇದನ್ನು ಹೇಳಿಕೊಡುವವರು ಯಾರು ಎಂದು ಪ್ರಶ್ನೆ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಪಿ.ಸ್ವರೂಪ್, ಪಿಯು ಕಾಲೇಜು ಶಿಕ್ಷಣ ಸಂಸ್ಥೆ ಉಪನಿರ್ದೇಶಕ ಸಿ.ಎಂ.ಮಹಾಲಿಂಗಯ್ಯ, ಬ್ರಿಲಿಯೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಚ್.ಎಸ್.ಅನೀಲ್ ಕುಮಾರ್, ಧರ್ಮಸ್ಥಳ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜು ಪ್ರೊ. ಡಾ. ಗುರುಬಸವರಾಜ ಯಲಗಚ್ಚಿನ, ಬಿ.ಎಚ್.ಸುರೇಶ್, ಪ್ರಾಂಶುಪಾಲ ಜವರೇಗೌಡ, ರಘು ಇತರರು ಇದ್ದರು.