ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ವ್ಹೀಲ್‌ಚೇರ್ ಕ್ರಿಕೆಟ್ ಆಟಗಾರ ಮೂರ್ನಾಡು ಹೊದ್ದೂರಿನ ವಿ.ಎಂ.ಲೋಹಿತ್‌ಗೌಡ ಅವರನ್ನು ಸನ್ಮಾನಿಸಲಾಯಿತು. ಡಿವೈಎಸ್ಪಿ ಡಿವೈಎಸ್‌ಪಿ ನಿರಂಜನರಾಜ್ ಅರಸ್, ಲಿಟಲ್ ಸ್ಕೂಲರ್ಸ್‌ ಅಕಾಡಮಿ ಸಂಸ್ಥಾಪಕಿ ಪೂಜಾ ಸಜೇಶ್ ಮತ್ತಿತರರು ಇದ್ದರು. 
ಜಿಲ್ಲೆ

ಆಟೋಟಗಳಿಂದ ದೇಹ ವಿಕಸನ

Kodagu

ವಿರಾಜಪೇಟೆ: ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯ. ಪಾಠ ಪ್ರವಚನಗಳು ಮನಸ್ಸನ್ನು ವಿಕಸನಗೊಳಿಸಿದರೆ, ಆಟೋಟಗಳು ದೇಹವನ್ನು ವಿಕಸನಗೊಳಿಸುತ್ತವೆ ಎಂದು ವಿರಾಜಪೇಟೆ ಡಿವೈಎಸ್‌ಪಿ ನಿರಂಜನರಾಜ್ ಅರಸ್ ಹೇಳಿದರು.

ಚಿಕ್ಕಪೇಟೆಯ ಜಿಎಂಪಿ ಶಾಲಾ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಗ್ಗುಲ ಗ್ರಾಮದ ಲಿಟಲ್ ಸ್ಕೂಲರ್ಸ್‌ ಅಕಾಡಮಿ ವಾರ್ಷಿಕ ಕ್ರೀಡಾಕೂಟದಲ್ಲಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಗ್ರಾಮೀಣ ಕ್ರೀಡೆಗಳನ್ನು ಮರೆತಿದ್ದಾರೆ. ಹೀಗಾಗಿ, ಪೋಷಕರು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.

ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ವ್ಹೀಲ್‌ಚೇರ್ ಕ್ರಿಕೆಟ್ ಆಟಗಾರ ಮೂರ್ನಾಡು ಹೊದ್ದೂರಿನ ವಿ.ಎಂ.ಲೋಹಿತ್‌ಗೌಡ ಮಾತನಾಡಿ, ನಾನು ಕೂಡ ಎಲ್ಲರಂತೆ ಇದ್ದೆ. ಯಾವುದೋ ಒಂದು ಘಟನೆಯಲ್ಲಿ ನನ್ನ ಬೆನ್ನುಹುರಿಗೆ ಹೊಡೆತ ಬಿದ್ದು ಅಂಗವೈಕಲ್ಯಕ್ಕೆ ತುತ್ತಾದೆ. ಆದರೆ ನಾನು ನನ್ನ ಭವಿಷ್ಯವನ್ನು ಹಾಳು ಮಾಡಿಕೊಂಡಿಲ್ಲ. 2013ರಲ್ಲಿ ಪ್ಯಾರಾ ಒಲಿಂಪಿಕ್‌ನಲ್ಲಿ ಭಾರತ ತಂಡ ಬೆಳ್ಳಿ ಪದಕ ಪಡೆದುಕೊಂಡಾಗ ಪ್ರಧಾನಿ ಮೋದಿ ಅವರು ತಂಡಕ್ಕೆ ನೀಡಿದ ಉತ್ತೇಜನದ ಮಾತುಗಳು ನನ್ನನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿತು. ಸತತ ಪ್ರಯತ್ನದಿಂದ ನನ್ನ ಆಸೆ ಈಡೇರಿದೆ. ಮುಂದಿನ ತಿಂಗಳು ಮೂರು ದೇಶಗಳ ದಿವ್ಯಾಂಗರ ವ್ಹೀಲ್‌ಚೇರ್ ಟಿ20 ಕ್ರಿಕೆಟ್‌ಗೆ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ಮುಂದಿನ ಬಾರಿಯ ಏಷ್ಯನ್‌ಗೇಮ್‌ನಲ್ಲಿ ಭಾಗವಹಿಸಲು ಅವಕಾಶ ಲಭಿಸಿದೆ. ಅಂಗವೈಕಲ್ಯ ಒಂದು ಶಾಪ ಎಂದು ತಿಳಿದುಕೊಂಡು ನನ್ನ ಪ್ರಯತ್ನ ಮುಂದುವರಿಸದ್ದಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ಲಿಟಲ್ ಸ್ಕೂಲರ್ಸ್‌ ಅಕಾಡೆಮಿ ಸಂಸ್ಥಾಪಕಿ ಪೂಜಾ ಸಜೇಶ್, ಸಂಸ್ಥೆಯ ಕಾರ್ಯದರ್ಶಿ ಪ್ರತಿಮಾ ರಂಜನ್, ಮುಖ್ಯ ಶಿಕ್ಷಕಿ ಮೀರಾ ಪೂಣಚ್ಚ, ಸ್ವಾತಿ, ಜಿಎಂಪಿ ಶಾಲಾ ಮುಖ್ಯ ಶಿಕ್ಷಕಿ ಅಣ್ಣಮ್ಮ ಉಪಸ್ಥಿತರಿದ್ದರು.