ಚಿತ್ರದುರ್ಗ: ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಹೊಸ ಆಟೋಗಳಿಗೆ ಪರವಾನಗಿ ನೀಡಬಾರದು ಎಂದು ಆಗ್ರಹಿಸಿ ನಗರ ಆಟೋ ಸಂಘಟನೆಗಳ ಒಕ್ಕೂಟದವರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲು ಒಕ್ಕೂಟದ ಪದಾಧಿಕಾರಿಗಳು ತೀರ್ಮಾನಿಸಿದ್ದರು. ಆದರೆ, 15 ದಿನದೊಳಗೆ ಕೆಲ ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ಪೊಲೀಸ್ ಇಲಾಖೆ ನೀಡಿದ್ದರಿಂದ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪರವಾನಗಿ ಇಲ್ಲದೆ ನಗರದಲ್ಲಿ ಸಂಚರಿಸುತ್ತಿರುವ ಆಟೋಗಳನ್ನು ಹಿಡಿದು ಹಾಕಬೇಕು. ಚಾಲಕರ ಸಂಘಟನೆಗಳು ನಿಗದಿಪಡಿಸಿರುವ ಸ್ಥಳಗಳಲ್ಲೇ ಜಿಲ್ಲಾಡಳಿತ ಆಟೋ ನಿಲ್ದಾಣ ತ್ವರಿತವಾಗಿ ನಿರ್ಮಿಸಬೇಕು. ಚಾಲಕರಿಗಾಗಿಯೇ ನಿಗಮ ಮಂಡಳಿ ರಚಿಸಬೇಕು. ಮಕ್ಕಳ ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ ಅಗತ್ಯ ಸೌಲಭ್ಯ ಕೊಡಿಸಬೇಕು ಎಂದು ಆಗ್ರಹಿಸಿದರು.
ನಿರ್ಗತಿಕ ಆಟೋ ಚಾಲಕರು ಸೂರಿಲ್ಲದೆ, ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಆಶ್ರಯ ಯೋಜನೆಯಡಿ ವಸತಿ ಸೌಕರ್ಯ ಕಲ್ಪಿಸಬೇಕು. ಸೀಟು ಹಾಕಿಕೊಂಡು ಹಳ್ಳಿಗಳಿಗೆ ಸಂಚರಿಸುವ ಅಪ್ಪೆ ಆಟೋಗಳನ್ನು ನಗರದಿಂದ ಬಹಿಷ್ಕರಿಸಬೇಕು. ನಗರ ಸಾರಿಗೆ ಬಸ್‌ಗಳಿಗೆ ಸಮಯ, ಸ್ಥಳ ನಿಗದಿಪಡಿಸಬೇಕು ಎಂದು ಕೋರಿದರು.
ಒಕ್ಕೂಟದ ವಿ.ತಿಪ್ಪೇಸ್ವಾಮಿ, ಎಂ.ಕುಮಾರಸ್ವಾಮಿ, ಎಸ್.ಎನ್. ಅಮಿತ್, ಇಕ್ಬಾಲ್, ಎಂ.ಸಿದ್ದೇಶ್, ಶಕೀಲ್, ಶೇಖರ್, ಮಂಜುನಾಥ್ ಸೇರಿ ಅನೇಕ ಆಟೋ ಚಾಲಕರು ಇದ್ದರು.