ಜಿಲ್ಲೆ

ಆಟೋ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿ ದರೋಡೆ

ಹಾಸನ: ಆಟೋ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿ 1.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗು ನಗದು ಕಳವು ಮಾಡಿರುವ ಘಟನೆ ನಗರದ 80 ಅಡಿ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಎಚ್.ಆರ್.ಪ್ರವೀಣ್ ಹಲ್ಲೆಗೊಳಗಾಗಿ ಹಣ ಕಳೆದುಕೊಂಡ ವ್ಯಕ್ತಿ.

ಇವರು ನಗರದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮುಗಿಸಿಕೊಂಡು ತಣ್ಣೀರುಹಳ್ಳ ವೃತ್ತದ ಬಳಿ ಹರಳಹಳ್ಳಿಗೆ ಹೋಗಲು ಆಟೋ ಹತ್ತಿದ್ದರು. ಆಟೋದಲ್ಲಿ ಇನ್ನೂ 3 ಜನ ಪ್ರಯಾಣಿಕರು ಕುಳಿತ್ತಿದ್ದು, 80 ಅಡಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಆಟೋದಲ್ಲಿದ್ದವರು ಪ್ರವೀಣ್ ಅವರಿಗೆ ಪ್ರಜ್ಞೆ ತಪ್ಪುವಂತೆ ಒಡೆದು ಕೊರಳಿನಲ್ಲಿದ್ದ 10 ಗ್ರಾಂ ತೂಕದ ಚಿನ್ನದ ಸರ, ಕೈಯಲ್ಲಿದ್ದ 14 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೆಟ್, ಬೆರಳಿನಲ್ಲಿದ್ದ 7 ಗ್ರಾಂ ತೂಕದ ಚಿನ್ನದ ಉಂಗುರ, ಜೇಬಿನಲ್ಲಿದ್ದ ಮೊಬೈಲ್ ಫೋನ್ ಹಾಗು ಪರ್ಸ್‌ನಲ್ಲಿದ್ದ 2000 ರೂ. ಹಣ ಒಟ್ಟು 1,80,000 ರೂ ಬೆಲೆಯ ಚಿನ್ನಾಭರಣ, 14,000 ರೂ. ಮೌಲ್ಯದ ಮೊಬೈಲ್ ಫೋನ್ ಮತ್ತು 2000 ರೂ. ನಗದು ಸೇರಿ ಹಲವು ದಾಖಲಾತಿಗಳನ್ನು ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಎಚ್.ಆರ್.ಪ್ರವೀಣ್ ಅವರು ಹಾಸನ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.