ಎಂಟು ಚಿನ್ನದ ಪದಕ ಪಡೆದು ತಂದೆ-ತಾಯಿಯೊಂದಿಗೆ ಸಂಭ್ರಮ ಹಂಚಿಕೊಂಡ ಎಸ್.ಕೃತಿ. 
ಜಿಲ್ಲೆ

ಆಟೋ ಡ್ರೈವರ್ ಮಗಳಿಗೆ ಎಂಟು ಚಿನ್ನದ ಪದಕ

ಬೆಳಗಾವಿ: ‘ಮನೆಯಲ್ಲಿ ಎಷ್ಟೇ ಕಷ್ಟ ಎದುರಾದರೂ ಅಪ್ಪ-ಅಪ್ಪ ಅದನ್ನು ತೋರಿಸಿಕೊಳ್ಳದೆ ನನ್ನ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಲೇ ಬಂದರು. ಇವತ್ತಿನ ಮೆಡಲ್‌ಗಳು ನಿಜಕ್ಕೂ ಅವರಿಗೆ, ಅವರ ಪ್ರೋತ್ಸಾಹಕ್ಕೆ ಸಲ್ಲಬೇಕು’ ಎಂದು ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಾಧನೆಗೈದು ರಾಜ್ಯಪಾಲರಿಂದ ಎಂಟು ಚಿನ್ನದ ಪದಕ ಪಡೆದ ಮಗಳ ಪ್ರತಿಕ್ರಿಯೆ ಕೇಳಿ ತಂದೆ-ತಾಯಿ ಕಣ್ಣು ಹನಿಗೂಡಿದವು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕುರಂಜಿ ವೆಂಕಟರಮನಗೌಡ ಕಾಲೇಜು ಆಫ್ ಇಂಜಿನಿಯರಿಂಗ್‌ನ ವಿದ್ಯಾರ್ಥಿನಿ ಎಸ್.ಕೃತಿ ಅವರು ಪದಕ ಪಡೆದ ಕ್ಷಣ ಪಾಲಕರು ಭಾವುಕರಾಗಿದ್ದರು. ಮಧ್ಯಮ ವರ್ಗದ ಜನಾರ್ಧನ ಹಾಗೂ ಶಾರದಾ ದಂಪತಿಗೆ ಇಬ್ಬರು ಹೆಣ್ಣಮಕ್ಕಳಿದ್ದು, ಜನಾರ್ಧನ ಆಟೋ ಓಡಿಸಿದರೆ, ಶಾರದಾ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಹಿರಿಯ ಪುತ್ರಿ ಕೃತಿ ಶುಕ್ರವಾರ 8 ಚಿನ್ನದ ಪದಕ ಪಡೆದಿದ್ದು, ಕಿರಿಯ ಪುತ್ರಿಗೂ ಉತ್ತಮ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಆಕೆ ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ವೇದಿಕೆಯಲ್ಲಿ ಹಿರಿ ಮಗಳ ಸಾಧನೆ ಕಣ್ತುಂಬಿಕೊಂಡ ಬಡ ದಂಪತಿ ಕಣ್ಣಲ್ಲಿ ಕನಸುಗಳು ಅರಳಿದ್ದವು.

ತಂದೆ-ತಾಯಿ ಖುಷಿ ಕಂಡು ಮತ್ತಷ್ಟು ಹಿಗ್ಗಿದ್ದ ಕೃತಿ, ಮನೆಯವರ ಪ್ರೋತ್ಸಾಹ ಹಾಗೂ ಕಾಲೇಜಿನಲ್ಲಿ ಮೇಲಿಂದ ಮೇಲೆ ಮೋಟಿವೇಷನ್‌ನಲ್ ಪ್ರೋಗ್ರಾಮ್‌ಗಳನ್ನು ಆಯೋಜಿಸುವ ಮೂಲಕ ಅಧ್ಯಯನಕ್ಕೆ ಸ್ಫೂರ್ತಿ ತುಂಬಿದ್ದಾರೆ. ಕಾಲೇಜಿನ ಎಲ್ಲ ಉಪನ್ಯಾಸಕರು ಹುರಿದುಂಬಿಸುತ್ತಿದ್ದರಿಂದಲೇ ಇದೆಲ್ಲವು ಸಾಧ್ಯವಾಗಿದೆ ಎಂದರು.

ಪರಿಶ್ರಮದಿಂದ ಮಾತ್ರ ಯಶಸ್ಸು: ‘ಆ ದಿನದ ಕೆಲಸ ಅಂದೇ ಮುಗಿಸಿ ಬಿಡಬೇಕು. ನಿರೀಕ್ಷೆಗೆ ತಕ್ಕಂತೆ ಶ್ರಮ ಪಡಲೇಬೇಕು. ಸಮಯ ಅಭಾವದ ನಡುವೆಯೂ ಗೊಂದಲಗಳನ್ನು ಸರಿಪಡಿಸಿಕೊಂಡು ಪರಿಶ್ರಮಪಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ’. ಶುಕ್ರವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವದಲ್ಲಿ ಸಿವಿಲ್ ಇಂಜಿಯನಿರಿಂಗ್ ವಿಭಾಗದ 18 ಚಿನ್ನದ ಪದಕ ಮುಡಿಗೇರಿಸಿಕೊಂಡ ಬೆಂಗಳೂರಿನ ಬಿಐಟಿ ಇಂಜಿನಿಯರಿಂಗ್ ಕಾಲೇಜಿನ ಎಸ್.ಮುರಳಿ ಮನದಾಳದ ಮಾತಿದು. ಇಷ್ಟವಾದುದನ್ನು ಕಷ್ಟಪಟ್ಟಾದರೂ ಮಾಡಬೇಕು ಅಂದಾಗ ಮಾತ್ರ ಆಸಕ್ತಿ, ಅಭಿರುಚಿಗೆ ಮೌಲ್ಯ ಲಭಿಸುತ್ತದೆ. ದೇಶದಲ್ಲಿ ಕೌಶಲಭರಿತ ಮಾನವ ಸಂಪನ್ಮೂಲ ವೃದ್ಧಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎನ್ನುವ ಅವರು, ತಮ್ಮ ಯಶಸ್ಸನ್ನು ಪರಿಶ್ರಮಕ್ಕೆ ಸಂದ ಫಲ ಎಂದು ವ್ಯಾಖ್ಯಾನಿಸಿದರು. ಸದ್ಯ ಎಂಟೆಕ್ ವ್ಯಾಸಂಗ ಮಾಡುತ್ತಿದ್ದು, ಮುಂದಿನ ದಿನಗಳ್ಲಲಿ ಪಿಎಚ್.ಡಿಗಾಗಿ ಸಂಶೋಧನಾ ಅಧ್ಯಯನ ಮಾಡಿ, ಪ್ರಾಧ್ಯಾಪಕನಾಗುವ ತುಡಿತವಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಸೇವೆ ಜತೆಗೆ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮಾಡುವ ಅತ್ಯುತ್ತಮ ಶಿಕ್ಷಕನಾಗುವೆ. ಆರಂಭದಿಂದ ಇಲ್ಲಿಯವರೆಗೂ ಎಲ್ಲರೀತಿಯಿಂದ ಪ್ರೋತ್ಸಾಹಿಸುತ್ತಲೇ ಬಂದಿರುವ ತಂದೆ-ತಾಯಿ ಹಾಗೂ ಮಹಾವಿದ್ಯಾಲಯದ ಉಪನ್ಯಾಸಕರಿಗೆ ಕೃತಜ್ಞನಾಗಿದ್ದೇನೆ ಎಂದು ಧನ್ಯತೆ ವ್ಯಕ್ತಪಡಿಸಿದರು.

ದೇಶದಲ್ಲೇ ಆಕರ್ಷಕ ಕಟ್ಟಡ ನಿರ್ಮಿಸುವಾಸೆ: ದೇಶದಲ್ಲೇ ಅತ್ಯುತ್ತಮ ಹಾಗೂ ಆಕರ್ಷಕ ಎಂದೆನಿಸುವ ಕಟ್ಟಡಗಳನ್ನು ನಿರ್ಮಿಸುವ ಆಸೆ. ಪದಕ ಪಡೆದಿರುವುದೇ ಸಾಧನೆ ಎಂದು ಕೂರುವುದಿಲ್ಲ. ಕನಸು ಈಡೇರಿಸುವುದಕ್ಕಾಗಿ ಉನ್ನತ ವ್ಯಾಸಂಗ ಮುಂದುವರಿಸುತ್ತೇನೆ ಎನ್ನುವುದು ಬೆಳಗಾವಿ ಚಿನ್ನದ ಹುಡುಗಿ ಭಾರತಿ ಭಾಗೋಜಿಯ ಆತ್ಮವಿಶ್ವಾಸ. ಬೆಳಗಾವಿಯ ಕೆಎಲ್‌ಇ ಕಾಲೇಜ್ ಆಫ್ ಇಂಜಿನಿಯರಿಂಗ್ ಶೇಷಗಿರಿ ಕಾಲೇಜಿನ ಸ್ಟ್ರಕ್ಚರಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದ ಬೆಳಗಾವಿಯ ಭಾರತಿ ಭಾಗೋಜಿ ಪತ್ರಿಕೆಯೊಂದಿಗೆ ಮಾತನಾಡಿ, ತಾಯಿ ಲೀಲಾವತಿ ಹಾಗೂ ಸೋದರ ಮಾವನ ಪ್ರೋತ್ಸಾದಿಂದ ಈ ಸಾಧನೆ ಸಾಧ್ಯವಾಗಿದ್ದು, ಮೆಡಲ್‌ಗಳನ್ನು ಅವರಿಗೆ ಅರ್ಪಿಸುವೆ ಎಂದರು.
ದಿನದಲ್ಲಿ ಒಂದೇ ಒಂದು ಗಂಟೆ ಓದಿದರೂ ಮನಸ್ಸು ಕೊಟ್ಟು ಓದಬೇಕು. ಅಂದಿನ ಸಿಲೆಬಸ್ ಅದೇ ದಿನ ಮನದಟ್ಟು ಮಾಡಿಕೊಳ್ಳಬೇಕು. ಜತೆಗೆ ಮುಂದಿನ ಸವಾಲುಗಳಿಗೆ ಸಿದ್ಧತೆ ನಡೆಸಬೇಕು. ಅಂದಾಗ ಮಾತ್ರ ಎಂಥದ್ದೇ ಜಟಿಲ ಸಮಸ್ಯೆಯನ್ನೂ ಗೆಲ್ಲಲು ಸಾಧ್ಯ ಎಂದು ಭಾರತಿ ಅಭಿಪ್ರಾಯಪಟ್ಟಿದ್ದಾರೆ.

ಮಗಳ ಸಾಧನೆ ತುಂಬ ಖುಷಿ ತಂದಿದೆ. ಇಬ್ಬರೂ ಹೆಣ್ಣಮಕ್ಕಳು ಎಷ್ಟು ಓದಲು ಬಯಸುತ್ತಾರೋ ಅಷ್ಟು ಓದಿಸುತ್ತೇವೆ. ಅವರ ಸಾಧನೆಯನ್ನು ನೋಡುವುದೇ ನಮ್ಮ ಖುಷಿ| ಶಾರದಾ,ಜನಾರ್ಧನ ಕೃತಿ ಪಾಲಕರು

| ರವಿ ಗೋಸಾವಿ, ಬೆಳಗಾವಿ