ಜಿಲ್ಲೆ

ಆಟೋ ಚಾಲಕರಿಗೆ ಸುರಕ್ಷತೆಯ ಅರಿವು ಅಗತ್ಯ

ಚಾಮರಾಜನಗರ: ಆಟೋ ಚಾಲಕರಿಗೆ ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗೃತಿ ಇದ್ದರೇ ಅನಾಹುತಗಳಿಂದ ದೂರ ಉಳಿಯಬಹುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ತಿಳಿಸಿದರು.

ತಾಲೂಕಿನ ನಾಗವಳ್ಳಿ ಗ್ರಾಮದ ಸರ್ವಧರ್ಮ ಸರ್ಕಲ್ ನಲ್ಲಿ ಸ್ನೇಹಜೀವಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿರುವುದರಿಂದ ಆಟೋ ಚಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು. ಅವರಿಗೆ ಉನ್ನತ ಮಟ್ಟದ ಶಿಕ್ಷಣ ಪಡೆಯಲು ಎಲ್ಲಾ ರೀತಿಯ ಪ್ರೋತ್ಸಾಹ ನೀಡಬೇಕು. ಬಹಳ ಪರಿಶ್ರಮದಿಂದ ಕಾರ್ಯನಿರ್ವಹಿಸುವ ಚಾಲಕರ ಮಕ್ಕಳು ಸಮಾಜದಲ್ಲಿ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.

ಮುಖಂಡ ಮಹೇಶ್ ಕುದರ್ ಮಾತನಾಡಿ, ಆಟೋ ಚಾಲಕರು ಪ್ರಯಾಣಿಕರೊಂದಿಗೆ ಉತ್ತಮ ರೀತಿಯಲ್ಲಿ ಮಾತನಾಡಿದಾಗ ಪ್ರಯಾಣಿಕರ ಹಾಗೂ ಆಟೋ ಚಾಲಕರ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ನಂತರದಲ್ಲಿ ಪ್ರಯಾಣಿಕರು ತಮ್ಮದೇ ಆಟೋಗಳಲ್ಲಿ ಪ್ರಯಾಣಿಸಲು ಬಯಸುತ್ತಾರೆ ಈ ಮೂಲಕ ಚಾಲಕರು ಆರ್ಥಿಕವಾಗಿ ಸದೃಢರಾಗಬಹುದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾ ಶ್ರೀನಿವಾಸ್, ಸದಸ್ಯ ಪ್ರಶಾಂತ್, ರವಿಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.