ಜಿಲ್ಲೆ

ಆಟೋ ಚಾಲಕರಿಗೆ ಸದಸ್ಯತ್ವ ಕಡ್ಡಾಯ : ಸಂಘದ ಜಿಲ್ಲಾಧ್ಯಕ್ಷ ಡಿ.ಎಚ್.ಮೇದಪ್ಪ ಸೂಚನೆ

Mysuru - Desk - Naveen Kumar H P


ಕೊಡಗು : ಆಟೋ ಚಾಲಕರ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕುವ ಸಲುವಾಗಿ ಆಟೋ ಮಾಲೀಕ, ಚಾಲಕರ ಸಂಘ ಮತ್ತು ಕೊಡಗು ರಕ್ಷಣ ವೇದಿಕೆ ಆಟೋ ಘಟಕದಲ್ಲಿ ಸದಸ್ಯತ್ವ ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಡಿ.ಎಚ್.ಮೇದಪ್ಪ ತಿಳಿಸಿದರು.


ಮಡಿಕೇರಿ ನಗರದಲ್ಲಿ 867 ಆಟೋಗಳಿವೆ. ಹೆಚ್ಚಿನ ಅಟೋ ಚಾಲಕರು ಸಂಘದಲ್ಲಿ ಸದಸ್ಯತ್ವ ಹೊಂದಿಲ್ಲ. ಇಂತಹ ಗುಂಪಿಗೆ ಸೇರಿದ ಚಾಲಕನೊಬ್ಬ ವೈದ್ಯಕೀಯ ಕಾಲೇಜಿನಲ್ಲಿ ಮಹಿಳೆಯರ ಹಾಸ್ಟೆಲ್ ಬಳಿ ಅಸಭ್ಯವಾಗಿ ವರ್ತಿಸಿ ಬಂಧಿತನಾಗಿದ್ದ. ಈ ಚಾಲಕ ಮಡಿಕೇರಿ ನಗರದ ಎರಡೂ ಆಟೋ ಚಾಲಕರ ಸಂಘದ ಸದಸ್ಯನಾಗಿಲ್ಲ. ಇಂತಹ ವ್ಯಕ್ತಿಗಳಿಂದ ಆಟೋ ಚಾಲನೆ ವೃತ್ತಿಯನ್ನೇ ಜೀವನವನ್ನಾಗಿ ಮಾಡುವ ಚಾಲಕರಿಗೆ ಕೆಟ್ಟ ಹೆಸರು ಬರುತ್ತಿದೆ. ಈ ಹಿನ್ನೆಲೆ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಆದ್ದರಿಂದ ನಗರದಲ್ಲಿ ಆಟೋ ಚಲಾಯಿಸುವ ಪ್ರತಿಯೊಬ್ಬರೂ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.


ಅಹಿತಕರ ಘಟನೆಯಲ್ಲಿ ಭಾಗಿಯಾದವರನ್ನು ಸಂಘದಿಂದ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಆಟೋ ಚಾಲಕ ಎಂಬುದಕ್ಕೆ ಯಾವುದೇ ಕುರುಹುಗಳಿಲ್ಲ. ಹೆಚ್ಚಿನ ಚಾಲಕರಿಗೆ ಆಟೋ ರಿಕ್ಷಾದ ಚಾಲನಾ ಪರವಾನಗಿಯೇ ಇರುವುದಿಲ್ಲ. ನಾಲ್ಕು ಚಕ್ರದ ವಾಹನದ ಪರವಾನಗಿಯಲ್ಲಿ ಆಟೋ ಚಲಾಯಿಸುತ್ತಿದ್ದಾರೆ. ಇದನ್ನು ಇತ್ತೀಚಿನ ದಿನಗಳಲ್ಲಿ ಸಾರಿಗೆ ಇಲಾಖೆ ಸಹ ಸಮ್ಮತಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆಯುತ್ತಿರುವ ಕೆಲವು ಅಹಿತಕರ ಘಟನೆಗಳಿಗೆ ಕಡಿವಾಣ ಹಾಕುವ ಸಲುವಾಗಿ ಸಂಘದ ಪದಾಧಿಕಾರಿಗಳ ಕೆಲವು ಸಂಪರ್ಕ ಸಂಖ್ಯೆಯನ್ನು ನಿಲ್ದಾಣದ ಮುಂಭಾಗದಲ್ಲಿ ನಾಮಫಲಕದೊಂದಿಗೆ ಅಳವಡಿಸಲಾಗುತ್ತಿದೆ. ಚಾಲಕರ ಕೆಟ್ಟ ನಡವಳಿಕೆಗಳು ಕಂಡುಬಂದಲ್ಲಿ ಮತ್ತು ಶಾಲಾ, ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದಲ್ಲಿ ಸಂಘದ ಗಮನಕ್ಕೆ ತರಬಹುದು. ಜತೆಗೆ ಆಟೋ ಚಾಲಕನ ಹಿಂಬದಿ ಸೀಟ್‌ನಲ್ಲಿ ಆಟೋ ನಂಬರ್ ಹಾಕುವ ಕ್ರಮಕ್ಕೆ ಮುಂದಾಗಿದ್ದೇವೆ. ಪ್ರಯಾಣಿಕರು ತಿಳಿಸಿದರೆ ಅಂತಹ ಚಾಲಕನನ್ನು ಸಂಘದಿಂದ ಹೊರಗಿಟ್ಟು ಆರ್‌ಟಿಒ ಇಲಾಖೆ ಮೂಲಕ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.


ಸಂಘಟನೆ ಏಕಪಕ್ಷೀಯವಾಗಿರುವುದಿಲ್ಲ. ಚಾಲಕರಿಗೂ ಯಾವುದೇ ಸಾರ್ವಜನಿಕರು ಕಿರುಕುಳ ನೀಡಲು ಮುಂದಾದಲ್ಲಿ ಪೊಲೀಸ್ ಇಲಾಖೆಗೆ ದೂರು ನೀಡಲು ನಿರ್ಧರಿಸಲಾಗಿದೆ. ಆಟೋ ಚಾಲಕರು ಇತರರಿಗೆ ಓಡಿಸಲು ಆಟೋ ನೀಡಿ ಅಹಿತಕರ ಘಟನೆ ಸಂಭವಿಸಿದ್ದಲ್ಲಿ ಚಾಲಕ ಮತ್ತು ಮಾಲೀಕರೇ ಹೊಣೆಯಾಗಿದ್ದಾರೆ. ಆದ್ದರಿಂದ ಸದಸ್ಯತ್ವ ಹೊಂದಿದವರು ಮಾತ್ರ ನಗರದಲ್ಲಿ ಚಾಲನೆ ಮಾಡಬೇಕು. ಸದಸ್ಯತ್ವ ಪಡೆಯದೇ ಚಾಲನೆ ಮಾಡಿದ್ದಲ್ಲಿ ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆಗಳ ಮುಖಾಂತರ ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.


ಆಟೋ ಮಾಲೀಕ ಚಾಲಕರ ಸಂಘದ ನಗರಾಧ್ಯಕ್ಷ ಎ.ಅರುಣ್‌ಕುಮಾರ್, ಉಪಾಧ್ಯಕ್ಷ ಸಮದ್, ಕೊಡಗು ರಕ್ಷಣ ವೇದಿಕೆ ಆಟೋ ಘಟಕದ ಅಧ್ಯಕ್ಷ ಸುಲೈಮನ್, ಕಾರ್ಯದರ್ಶಿ ರಫಿಕ್, ಆಟೋ ಮಾಲೀಕರಾದ ಬಾಲಚಂದ್ರ ಉಪಸ್ಥಿತರಿದ್ದರು.