ಹೊಳೆನರಸೀಪುರ: ಕರೊನಾ ವೈರಸ್ ವಿಶ್ವವನ್ನೇ ತಲ್ಲಣಗೊಳಿಸಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಪಾಸಣೆಗೆ ಒಳಗಾಗುವುದು ಅನಿವಾರ್ಯ ಎಂದು ಡಿವೈಎಸ್ಪಿ ಲಕ್ಷ್ಮೇಗೌಡ ತಿಳಿಸಿದರು.
ಪಟ್ಟಣ ಠಾಣೆ ಆವರಣದಲ್ಲಿ ಶುಕ್ರವಾರ ಆಟೋ ಚಾಲಕರಿಗೆ ಕರೊನಾ ತಪಾಸಣೆಗೆ ಚಾಲನೆ ನೀಡಿ ಮಾತನಾಡಿ, ಆಟೋ ಚಾಲಕರು ಆರೋಗ್ಯ ದೃಷ್ಟಿಯಿಂದ ಯೋಗ, ಪ್ರಾಣಾಯಾಮ ಮಾಡಿ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬೇಕು. ಯಾವುದೇ ಕೆಟ್ಟ ಚಟಗಳಿಗೆ ದಾಸರಾಗಿ ಜೀವನವನ್ನು ನಾಶ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಆಟೋಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯಬೇಡಿ, ಕರೊನಾ ವೈರಾಣುವಿನಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸಿ, ಕಾನೂನಿನ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ ಎಂದು ತಿಳಿಸಿದರು.
ವೃತ್ತ ನಿರೀಕ್ಷಕ ಆರ್.ಪಿ.ಅಶೋಕ್, ನಗರ ಠಾಣೆಯ ಪಿಎಸ್ಸೈ ಕುಮಾರ್, ಪ್ರಸಾದ್, ಗ್ರಾಮಾಂತರ ಠಾಣೆಯ ಪಿಎಸ್ಸೈ ಮೋಹನಕೃಷ್ಣ, ಎಎಸ್ಸೈಬಾಬು ಇತರರಿದ್ದರು.