ಜಿಲ್ಲೆ

ಆಟೋ ರಹದಾರಿ ನವೀಕರಣ ವಿಳಂಬ ಶುಲ್ಕ ಪರಿಷ್ಕರಣೆ

Dharwad

ಧಾರವಾಡ: ಆಟೋರಿಕ್ಷಾ ರಹದಾರಿ ಪತ್ರಗಳ ವಿಳಂಬ ನವೀಕರಣಕ್ಕೆ ಮೊದಲ ಮೂರು ತಿಂಗಳಿಗೆ ಆಕರಿಸುತ್ತಿದ್ದ ಸಾವಿರ ರೂ. ದಂಡ ಶುಲ್ಕವನ್ನು ಕೋವಿಡ್-19 ಹಿನ್ನೆಲೆಯಲ್ಲಿ ಪರಿಷ್ಕರಿಸಿ 250 ರೂ.ಗೆ ಇಳಿಸಲಾಗಿದೆ. ಮೂರು ತಿಂಗಳ ನಂತರ ಪ್ರತಿ ತಿಂಗಳಿಗೆ ವಿಧಿಸುತ್ತಿದ್ದ 100 ರೂ.ದಂಡವನ್ನು 50ರೂ.ಗೆ ಇಳಿಸಿದ್ದು, ಸೆಪ್ಟೆಂಬರ್ ಅಂತ್ಯದವರೆಗೆ ಈ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲಾಕ್​ಡೌನ್ ಜಾರಿ ಹಿನ್ನೆಲೆಯಲ್ಲಿ ಮಾ. 31ರವರೆಗೆ ನೋಂದಣಿಯಾದ ಆಟೋ ರಿಕ್ಷಾಗಳು ರಹದಾರಿ ಪತ್ರ ಪಡೆಯಲು ಸಾಧ್ಯವಾಗದ ಕಾರಣಕ್ಕೆ ಅನುಕೂಲ ಕಲ್ಪಿಸಲು ಆಟೋ ಚಾಲಕರು ಹಾಗೂ ಮಾಲಕರ ಕ್ಷೇಮಾಭಿವೃದ್ಧಿ ಸಂಘ ಮನವಿ ಮಾಡಿದ್ದರಿಂದ ಈ ಪರಿಷ್ಕರಣೆ ಮಾಡಲಾಗಿದೆ. ಸೆಪ್ಟಂಬರ್ ಅಂತ್ಯದವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಜಿಲ್ಲೆಯಲ್ಲಿನ ಆಟೋ ಚಾಲಕರು ಮತ್ತು ಮಾಲೀಕರು ರಹದಾರಿ ನವೀಕರಿಸಿಕೊಳ್ಳಬೇಕು ಎಂದರು.

2020ರ ಮಾ. 31ರವರೆಗೆ ಹೊಸ ಆಟೋ ರಿಕ್ಷಾಗಳನ್ನು ನೋಂದಣಿ ಮಾಡಿಸಿಕೊಂಡು, ಲಾಕ್​ಡೌನ್​ನಿಂದ ರಹದಾರಿ ಪತ್ರಗಳನ್ನು ಪಡೆಯಲು ಸಾಧ್ಯವಾಗದ 74 ಆಟೋ ರಿಕ್ಷಾಗಳಿಗೆ ರಹದಾರಿ ಪತ್ರ ನೀಡುವುದು, ನೋಂದಣಿಯಾಗದ 94 ಭಾರತ್ ಸ್ಟೇಜ್ (ಬಿಎಸ್)-6 ಮಾಪನದ ಆಟೋ ರಿಕ್ಷಾಗಳನ್ನು 15 ದಿನಗಳಲ್ಲಿ ನೋಂದಾಯಿಸಿಕೊಂಡು ರಹದಾರಿ ಪತ್ರ ಪಡೆಯಲು ಅನುಮತಿ ನೀಡಿದರು. 15 ವರ್ಷಗಳ ಮೇಲ್ಪಟ್ಟ ಸಾರಿಗೆ ವರ್ಗದ ಪ್ರಯಾಣಿಕ ವಾಹನಗಳ ರಹದಾರಿ ಪತ್ರ ನವೀಕರಿಸಿ ನೀಡುವಿಕೆ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿರುವ ಆದೇಶವನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಮೋಟಾರು ವಾಹನ ಕಾಯ್ದೆ 1988ರ ಅಧಿನಿಯಮ 88ರ ಪ್ರಕಾರ ಹು-ಧಾ ಪೂರ್ವ ಮತ್ತು ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿಗಳ ವ್ಯಾಪ್ತಿಗೆ ಸೇರಿದ ವಾಕರಸಾ ಸಂಸ್ಥೆಯ 206 ಮಜಲು ವಾಹನಗಳು, 44 ಮ್ಯಾಕ್ಸಿಕ್ಯಾಬ್​ಗಳು ಸೇರಿ ವಿವಿಧ ಪ್ರಕಾರದ ವಾಹನಗಳಿಗೆ ಸೆಪ್ಟಂಬರ್ 2019ರಿಂದ ಮೇ 2020ರ ವರೆಗೆ ನೀಡಿರುವ ರಹದಾರಿಗಳನ್ನು ಸಭೆಯಲ್ಲಿ ಅನುಮೋದಿಸಲಾಯಿತು.

ಪೊಲೀಸ್ ಉಪ ಆಯುಕ್ತ ಆರ್.ಬಿ. ಬಸರಗಿ, ಡಿವೈಎಸ್​ಪಿ ರವಿ ನಾಯಕ, ಪ್ರಾಧಿಕಾರದ ಸದಸ್ಯ ವಿವೇಕಾನಂದ ವಿಶ್ವಜ್ಞ, ಎಚ್. ರಾಮನಗೌಡರ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ್, ಸಾರಿಗೆ ಇಲಾಖೆ ಜಿ.ವಿ. ದಿನಮಣಿ, ಲಕ್ಷ್ಮೀ ಬೂದಣ್ಣವರ, ಮಲ್ಲಪ್ಪ ಬನಹಟ್ಟಿ, ಇತರರು ಇದ್ದರು.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಡಿ. ನಾಯಕ ಸ್ವಾಗತಿಸಿದರು. ಹು-ಧಾ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ವಾಡಮಠ ನಿರೂಪಿಸಿದರು.