ಜಿಲ್ಲೆ

ಆಟೋ ಚಾಲಕರಿಗೆ ಪರಿಹಾರ ಗಗನ ಕುಸುಮ

ಹುಬ್ಬಳ್ಳಿ: ರಾಜ್ಯ ಸರ್ಕಾರ ಲಾಕ್​ಡೌನ್ ಹಿನ್ನೆಲೆಯಲ್ಲಿ ಶ್ರಮಿಕ ವರ್ಗದವರಿಗೆ 1610 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ್ದು, ಆಟೋ, ಕ್ಯಾಬ್ ಚಾಲಕರಿಗೆ ಮಾತ್ರ ಇನ್ನೂ ಗಗನ ಕುಸುಮವಾಗಿದೆ. ಧಾರವಾಡ ಜಿಲ್ಲೆಯ ಅಂದಾಜು 20 ಸಾವಿರ ಆಟೋ ಚಾಲಕರ ಪೈಕಿ ಪರಿಹಾರ ಬಂದಿರುವುದು ಕೇವಲ ಬೆರಳೆಣಿಕೆ ಮಂದಿಗೆ!

ಲಾಕ್​ಡೌನ್​ನಲ್ಲಿ ಆಟೋ ಹಾಗೂ ಕ್ಯಾಬ್ ಚಾಲಕರು ಅತ್ಯಂತ ಸಂಕಷ್ಟದ ಸ್ಥಿತಿ ಎದುರಿಸಿದರು. ರಾಜ್ಯ ಸರ್ಕಾರ ಶ್ರಮಿಕರಿಗೆ ಘೋಷಣೆ ಮಾಡಿದ ಪರಿಹಾರ ಪ್ಯಾಕೇಜ್​ನಲ್ಲಿ ಆಟೋ ಚಾಲಕರನ್ನೂ ಸೇರಿಸಿದಾಗ ಅತ್ಯಂತ ಸಂತೋಷ ಪಟ್ಟಿದ್ದರು.

ಇದೀಗ ಲಾಕ್​ಡೌನ್ ಮುಗಿದು ಹೋಗಿದೆ. ಅರ್ಜಿ ಹಾಕಿ ಹಲವು ದಿನ ಕಳೆದರೂ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಒಂದು ಕಡೆ ಸರ್ಕಾರ ಆಟೋ ಚಾಲಕರಿಗೆ ಪರಿಹಾರ ನೀಡಲು ನೂರೆಂಟು ಷರತ್ತು ವಿಧಿಸಿದೆ. ಇನ್ನೊಂದೆಡೆ ಎಲ್ಲ ಷರತ್ತು ಪೂರೈಸಿ ಅರ್ಜಿ ಹಾಕಿದ ಚಾಲಕರಿಗೆ ಇನ್ನೂ ಪರಿಹಾರ ನೀಡಿಲ್ಲ.

ಷರತ್ತುಗಳೇನು?: ಆಟೋ ಚಾಲಕರು, ಕ್ಯಾಬ್ ಚಾಲಕರು, ಕಟ್ಟಡ ಕಾರ್ವಿುಕರು ಸೇರಿ ಅಸಂಘಟಿತ ಕಾರ್ವಿುಕರಿಗೆ ರಾಜ್ಯ ಸರ್ಕಾರ ತಲಾ ಐದು ಸಾವಿರ ರೂ. ನಗದು ಪ್ಯಾಕೇಜ್ ಘೋಷಿಸಿತು. ಅದರಂತೆ ಆಟೋ ಚಾಲಕರು ಕಡ್ಡಾಯವಾಗಿ ಪರವಾನಗಿ, ಬ್ಯಾಡ್ಜ್ ಹೊಂದಿರಬೇಕು, ವಾಹನದ ಸಂಖ್ಯೆ (ಆರ್​ಸಿ), ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಇವಿಷ್ಟನ್ನು ಒದಗಿಸಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಹಾಕಿದರೆ ಅವರ ಖಾತೆಗೆ ಹಣ ಜಮಾ ಆಗಲಿದೆ ಎಂದು ಹೇಳಲಾಗಿದೆ.

ಚಾಲಕರ ಸಮಸ್ಯೆ: ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಶೇ. 70ರಷ್ಟು ಆಟೋ ಚಾಲಕರು ಹೊಟ್ಟೆಪಾಡಿಗಾಗಿ ಬೇರೆಯವರ ಆಟೋ ಚಾಲನೆ ಮಾಡುತ್ತಿದ್ದಾರೆ. ಅವರಿಗೆ ಸ್ವಂತ ಆಟೋ ಇಲ್ಲ. ಆದರೆ, ಸರ್ಕಾರ ಪರಿಹಾರ ನೀಡಲು ವಾಹನದ ಆರ್​ಸಿ ಕೇಳುತ್ತಿದೆ. ಅವರು ಆರ್​ಸಿ ಎಲ್ಲಿಂದ ಕೊಡಬೇಕು? ಆಟೋ ಮಾಲೀಕರು ಬ್ಯಾಡ್ಜ್​ಗೆ ತಮ್ಮ ಆಟೋ ಸಂಖ್ಯೆ ಕೊಟ್ಟು ಬಿಡುತ್ತಿದ್ದಾರೆ. ನಾವೆಲ್ಲ ಏನು ಮಾಡುವುದು ಎಂದು ಅನೇಕರು ಅಲವತ್ತುಕೊಂಡಿದ್ದಾರೆ.

ಆರ್​ಸಿ ಕೇಳಬೇಡಿ: ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಆಟೋ ಚಾಲಕರ ಕಾಳಜಿ ಇದ್ದರೆ ವಾಹನದ ಆರ್​ಸಿ ಕೇಳಬಾರದು. ಉಳಿದೆಲ್ಲ ದಾಖಲೆ ನೀಡಲು ನಾವು ಸಿದ್ಧರಿದ್ದೇವೆ ಎಂದು ಆಟೋ ಚಾಲಕರು ಹೇಳುತ್ತಿದ್ದಾರೆ.

ಬ್ಯಾಡ್ಜ್ ಇರುವ ಆಟೋ ಚಾಲಕರು, ಹೆವಿ ಬ್ಯಾಡ್ಜ್ ಲಾರಿ ಚಾಲಕರಿಗೂ ಪರಿಹಾರ ಕೊಡಬೇಕು. ಆರ್​ಸಿ ಕೇಳಬಾರದು. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರಿಗೆ ಮನವಿ ಮಾಡಿದ್ದೇವೆ. | ಶೇಖರಯ್ಯ ಮಠಪತಿ, ಆಟೋ ಚಾಲಕರ ಮುಖಂಡ, ಹುಬ್ಬಳ್ಳಿ