ಜಿಲ್ಲೆ

ಆಟೋ ಏರಿ ಊರು ಸುತ್ತಿದ ಕರೊನಾ!

ಕಾರವಾರ/ಭಟ್ಕಳ: ಕರೊನಾ ಸೋಂಕು ಆಟೋರಿಕ್ಷಾ ಹತ್ತಿ ಭಟ್ಕಳ ಪಟ್ಟಣವೆಲ್ಲ ಓಡಾಡಿದೆ!!! ಹೌದು, ಕರೊನಾ ಸೋಂಕು ಖಚಿತವಾದ ಆಟೋ ರಿಕ್ಷಾ ಚಾಲಕನೊಬ್ಬ ಪಟ್ಟಣವೆಲ್ಲ ಓಡಾಡಿದ ಸುದ್ದಿ ಭಟ್ಕಳದಲ್ಲಿ ನಡುಕ ಹುಟ್ಟಿಸಿದೆ. ಭಟ್ಕಳದ ಇನ್ನೂ ಏಳು ಜನರಿಗೆ ಕರೊನಾ ಇರುವುದು ಭಾನುವಾರ ಖಚಿತವಾಗಿದೆ. ಒಟ್ಟಾರೆ ಭಟ್ಕಳದ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಎಲ್ಲರೂ ಮೂಲ ಸೋಂಕಿತೆ ಪಿ. 659ರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ ವ್ಯಕ್ತಿಗಳಾಗಿದ್ದಾರೆ.

ಆಂಬುಲೆನ್ಸ್ ಹತ್ತಲಿಲ್ಲ: ಸೋಂಕಿತೆ ಪಿ. 659 ಈ ಯುವತಿಯು ಮೇ 1ರಂದು ಆಟೋ ಮೇಲೆ ಆಸ್ಪತ್ರೆಗೆ ತೆರಳಿದ್ದರು. ಈಕೆಗೆ ಸೋಂಕು ಖಚಿತವಾದ ಹಿನ್ನೆಲೆಯಲ್ಲಿ ಈಕೆಯ ಸಂಪರ್ಕಕ್ಕೆ ಬಂದ ಬದ್ರಿಯಾ ಸ್ಟ್ರೀಟ್​ನ ಆಟೋ ಚಾಲಕ(ಪಿ-800) ಗಂಟಲ ದ್ರವದ ಮಾದರಿಯನ್ನು ಶನಿವಾರ ಪಡೆಯಲಾಗಿತ್ತು. ಆದರೆ, ಆಡಳಿತ ನಿಗದಿ ಮಾಡಿದ ಕ್ವಾರಂಟೈನ್ ಕೇಂದ್ರದಲ್ಲಿರಲು ಆತ ಒಪ್ಪದೇ ಮನೆಗೆ ತೆರಳಿದ್ದ ಎನ್ನಲಾಗಿದೆ. ಭಾನುವಾರ ಆತನಿಗೆ ಕರೊನಾ ಇರುವುದು ಖಚಿತವಾದ ನಂತರವೂ ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಬರಲು ಒಪ್ಪಿರಲಿಲ್ಲ. ಮೂವರು ಮಕ್ಕಳು, ಪತ್ನಿಯ ಜತೆಗೆ ಆಟೋದಲ್ಲೇ ಆಗಮಿಸಿದ್ದ ಎನ್ನಲಾಗಿದೆ. ಆಟೋ ಚಾಲಕನ ಈ ವರ್ತನೆ ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಸೋಂಕಿತರು ಹಾಗೂ ಶಂಕಿತರಿಂದ ಕ್ವಾರಂಟೈನ್​ಗೆ ಒಳಗಾಗಲು ಪ್ರತಿರೋಧ ವ್ಯಕ್ತವಾಗುತ್ತಿರುವುದು ಆಡಳಿತದ ತಲೆಬಿಸಿಗೆ ಕಾರಣವಾಗಿದೆ. ಸದ್ಯ ಈ ಸೋಂಕಿತ 28 ಜನರ ಸಂಪರ್ಕಕ್ಕೆ ಬಂದ 80ರಷ್ಟು ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ವರದಿ ಬರುವುದು ಬಾಕಿ ಇದೆ. ಸದ್ಯ 32 ಜನರನ್ನು ಅಂಜುಮನ್ ಕಾಲೇಜ್​ನ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ.ಭಟ್ಕಳದ ಸಂಪರ್ಕಕ್ಕೆ ಬಂದ ಬೇರೆ ಪ್ರದೇಶದಲ್ಲಿಯ ಶಂಕಿತರ ಗಂಟಲ ದ್ರವದ ಮಾದರಿಯನ್ನೂ ಕಳಿಸಲಾಗಿದ್ದು, ಅದರ ವರದಿ ಮೇ 11ರಂದು ಬರುವುದು ಬಾಕಿ ಇದೆ. ಇದು ಇಡೀ ಜಿಲ್ಲೆಯನ್ನು ಆತಂಕಕ್ಕೀಡು ಮಾಡಿದೆ.

ಆರೋಗ್ಯ ಸ್ಥಿತಿ ಸ್ಥಿರ: ಭಟ್ಕಳದಲ್ಲಿ ಈಗಾಗಲೇ ಸೋಂಕು ಖಚಿತವಾದ 28 ಜನರಲ್ಲಿ 19 ಜನರನ್ನು ಕಾರವಾರ ಕ್ರಿಮ್್ಸ ಕರೊನಾ ವಾರ್ಡ್​ಗೆ ಸ್ಥಳಾಂತರಿಸಲಾಗಿದೆ. 83 ವರ್ಷದ ಸೋಂಕಿತ ವೃದ್ಧನಲ್ಲಿ ಆಯಾಸದ ಲಕ್ಷಣ ಕಂಡುಬರುತ್ತಿದ್ದು, ಉಳಿದವರ ಆರೋಗ್ಯ ಸ್ಥಿರವಾಗಿದೆ ಎಂದು ಕ್ರಿಮ್್ಸ ನಿರ್ದೇಶಕ ಡಾ. ಗಜಾನನ ನಾಯಕ ತಿಳಿಸಿದ್ದಾರೆ. ಉಳಿದ ಸೋಂಕಿತರನ್ನೂ ಕಾರವಾರ ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆದಿದೆ.

ಭಟ್ಕಳದಲ್ಲೇ ಚಿಕಿತ್ಸೆ ನೀಡಲು ಮನವಿ: ಭಟ್ಕಳದ ಕರೊನಾ ಸೋಂಕಿತರಿಗೆ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಅಥವಾ ಅರಗಾ ನೌಕಾ ಆಸ್ಪತ್ರೆ ಪತಂಜಲಿಯಲ್ಲಿ ಚಿಕಿತ್ಸೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಸದರಿಗೆ ಮನವಿ ಮಾಡಿದ್ದೇನೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕಾರವಾರ ಕ್ರಿಮ್್ಸ ಕರೊನಾ ವಾರ್ಡ್​ನಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಎಲ್ಲ ಜಿಲ್ಲೆಯಂತೆ ಇಲ್ಲೂ ಜಿಲ್ಲಾ ಆಸ್ಪತ್ರೆಯಲ್ಲಿ ಕರೊನಾ ವಾರ್ಡ್ ತೆರೆಯಲಾಗಿದೆ. ಜನ ಆತಂಕಪಡುವ ಅಗತ್ಯವಿಲ್ಲ’ ಎಂದಿದ್ದಾರೆ. ಆದರೂ ಹಲವರು ಈ ಬೆಳವಣಿಗೆ ಹೆದರಿಕೆಗೆ ಕಾರಣವಾಗಿರುವುದರಿಂದ ಈ ಕುರಿತು ಸಚಿವ ಶಿವರಾಮ ಹೆಬ್ಬಾರ ಹಾಗೂ ಸಂಸದರ ಜತೆ ರ್ಚಚಿಸಿ ಕ್ರಮ ವಹಿಸುತ್ತೇನೆ ಎಂದಿದ್ದಾರೆ.