ಸೋಮವಾರಪೇಟೆ: ಮಹಿಳಾ ಸಮಾಜದ ವತಿಯಿಂದ ಆಟಿ 18ರ ಪ್ರಯುಕ್ತ ಸಂಘದ ಸದಸ್ಯರಿಗೆ ಆಟಿ ವಿಶೇಷ ಭಕ್ಷ್ಯ ಭೋಜನಗಳ ತಯಾರಿಕೆ ಮತ್ತು ಪ್ರದರ್ಶನ ಕಾರ್ಯಕ್ರಮ ಗುರುವಾರ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಸಮಾಜದ ಅಧ್ಯಕ್ಷೆ ಸುಮಾ ಸುದೀಪ್ ಮಾತನಾಡಿ, ಮುಂಗಾರು ಮಳೆಯ ಸಂದರ್ಭ ಆಟಿ 18 ಬಹಳ ಪ್ರಾಮುಖ್ಯತೆಯನ್ನು ಪಡೆದಿದ್ದು, ತರಕಾರಿ, ಮಾಂಸ, ಮೀನು ಸೇರಿದಂತೆ ಹಲವು ಪದಾರ್ಧಗಳಲ್ಲಿ ಔಷಧೀಯ ಗುಣಗಳಿವೆ ಎಂದು ನಮ್ಮ ಪೂರ್ವಿಕರು ಹೇಳುತ್ತಾ ಬಂದಿದ್ದು, 18ನೇ ದಿನ ವಿವಿಧ ತಿಂಡಿ ತಿನಿಸುಗಳನ್ನು ಮಾಡಿಕೊಂಡು ತಿನ್ನುವ ಅಭ್ಯಾಸ ರೂಢಿಯಲ್ಲಿದೆ. ಈ ನಿಟ್ಟಿನಲ್ಲಿ ಸಮಾಜದ ಸದಸ್ಯರಿಗೆ ಮಧುಬಾನ ಸೊಪ್ಪು, ಕೆಸವಿನ ಸೊಪ್ಪು ಹಾಗೂ ಹಲಸಿನ ಹಣ್ಣಿನಿಂದ ಮಾಡಿದ ತಿಂಡಿ ತಿನಿಸುಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆಯ್ದ ಆಕರ್ಷಕ ತಿಂಡಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಸಮಾಜದ ಉಪಾಧ್ಯಕ್ಷೆ ಜಲಜಾ ಶೇಖರ್, ಕಾರ್ಯದರ್ಶಿ ಲೀಲಾ ನಿರ್ವಾಣಿ, ನಿರ್ದೇಶಕರುಗಳಾದ ಗಾಯತ್ರಿ ನಾಗರಾಜು, ಗೀತಾ ರಾಜು, ವರಲಕ್ಷ್ಮೀ ಸಿದ್ದೇಶ್ವರ್, ವಿಜಯಲಕ್ಷ್ಮೀ ಸುರೇಶ್, ಶೋಭಾ ಯಶ್ವಂತ್, ದಾಕ್ಷಾಯಿಣಿ ಶಿವಾನಂದ್, ಆಶಾ ಸುಭಾಕರ್, ಅಮಿತಾ ಪ್ರಸಾದ್ ಮತ್ತಿತರರು ಇದ್ದರು.