ಬಾಳೆಹೊನ್ನೂರಿನಲ್ಲಿ ಆಟಿ ಅಮಾವಾಸ್ಯೆಯ ಅಂಗವಾಗಿ ಬಸ್‌ನಿಲ್ದಾಣದ ಮುಂಭಾಗದ ಮೊಬೈಲ್ ಕ್ಯಾಂಟೀನ್‌ನಲ್ಲಿ ಆಟಿ ಔಷಧ ಸ್ವೀಕರಿಸುತ್ತಿರುವ ಗ್ರಾಹಕ.  
ಜಿಲ್ಲೆ

ಆಟಿ ಅಮಾವಾಸ್ಯೆಗೆ ಹಾಲೆ ಮರದ ಔಷಧ ಸೇವನೆ

ಬಾಳೆಹೊನ್ನೂರು: ಆಷಾಡಮಾಸದ ಅಮಾವಾಸ್ಯೆ (ಆಟಿ) ಅಂಗವಾಗಿ ಹೋಬಳಿಯ ವಿವಿಧೆಡೆ ಜನರು ರೋಗನಿರೋಧಕ ಶಕ್ತಿ ಹೊಂದಿರುವ ಮದ್ದಾಲೆ ಮರ (ಹಾಲೆ ಮರ, ಸಪ್ತವರ್ಣ ಮರ)ದ ತೊಗಟೆಯ ಔಷಧ (ಕಷಾಯ) ವನ್ನು ಸೋಮವಾರ ಸೇವಿಸಿದರು.

ಮದ್ದಾಲೆ (ಹಾಲೆ) ಮರದ ತೊಗಟೆಯನ್ನು ಕೆತ್ತಿ ಈ ಹಿಂದಿನ ಕಾಲದಿಂದಲೂ ಕಷಾಯ ತಯಾರಿಸಿ ಕುಡಿಯುವ ಪದ್ಧತಿಯಿದ್ದರೂ ಸಹ ಆಷಾಡ ಅಮಾವಾಸ್ಯೆ ದಿನ ಇದನ್ನು ಸೇವಿಸುವುದರಿಂದ ಹಲವು ರೋಗ ನಿವಾರಣೆಯಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದು ಹಿಂದಿನಿಂದಲೂ ನಡೆದುಕೊಂಡು ಬಂದ ನಂಬಿಕೆ.
ಅಮಾವಾಸ್ಯೆಯ ದಿನ ಸೂರ್ಯೋದಯಕ್ಕೂ ಮುನ್ನ ಬ್ರಾಹ್ಮೀ ಮೂಹೂರ್ತದಲ್ಲಿ, ಸೂರ್ಯೋದಯಕ್ಕೆ ಅಭಿಮುಖವಾಗಿ ಹೋಗಿ ಮದ್ದಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಕೆತ್ತಿ ತಂದು ಮನೆಯಲ್ಲಿ ಔಷಧವನ್ನು ತಯಾರಿಸಬೇಕು ಎಂಬ ಬಗ್ಗೆ ಹಲವು ಪುಸ್ತಕಗಳಲ್ಲಿಯೂ ಉಲ್ಲೇಖವಿದೆ.
ಮದ್ದಾಲೆ ಮರದಲ್ಲಿ ಏಳು ಎಲೆಗಳು ಇರುವ ಕಾರಣ ಸಂಸ್ಕೃತದಲ್ಲಿ ಸಪ್ತವರ್ಣ (ಸಪ್ತಪರ್ಣ) ಎನ್ನುತ್ತಾರೆ. ಮದ್ದಾಲೆ ಮರದಲ್ಲಿ ಕಾಯಿಲೆಗಳನ್ನು ನಿವಾರಿಸುವ ಗುಣ, ವೈರಾಣು ನಿರೋಧಕ, ಕ್ಯಾನ್ಸರ್ ನಿರೋಧಕ ಮತ್ತು ಕ್ಯಾನ್ಸರ್ ಗಡ್ಡೆಯ ಗಾತ್ರ ಕಡಿಮೆ ಮಾಡುವ ಗುಣ, ಯಕೃತ್ ರಕ್ಷಿಸುವ ಗುಣ, ಅತಿಸಾರ ನಿರೋಧಕ, ಜ್ವರ ಕಡಿಮೆ ಮಾಡುವ ಗುಣ ಹೊಂದಿದೆ.
ಆಟಿ ಅಮಾವಾಸ್ಯೆಯ ಆಚರಣೆ ದೇಶಾದ್ಯಂತ ಇದ್ದರೂ ಸಹ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಾತ್ರ ಈ ರೀತಿ ಔಷಧ ಸ್ವೀಕರಿಸುವ ಮೂಲಕ ಆಟಿ ಆಚರಣೆ ಮಾಡುತ್ತಿರುವುದು ವಿಶೇಷ. ಮದ್ದಾಲೆ ಮರದ ತೊಗಟೆಯನ್ನು ಕೆತ್ತಿ ತಂದ ಬಳಿಕ ಅದನ್ನು ಜಜ್ಜಿ ಅದಕ್ಕೆ ಕೆಲವು ಔಷಧೀಯ ಮಸಾಲೆ ಪದಾರ್ಥದ ವಸ್ತುಗಳನ್ನು ಸೇರಿಸಿ ರಸ ತೆಗೆಯುತ್ತಾರೆ. ಹೀಗೆ ತೆಗೆದ ರಸವನ್ನು ಓರ್ವ ವ್ಯಕ್ತಿ 24 ಮಿ.ಲೀ. ಸೇವಿಸಬಹುದು. ಕುದಿಸಿ ಕಷಾಯ ಮಾಡಿದರೆ 50 ಮಿಲಿಯಷ್ಟು ಸೇವನೆ ಮಾಡಬಹುದು.