ಕುಶಾಲನಗರ: ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವುದು ಬಹಳ ಮುಖ್ಯ ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಹೇಳಿದರು.
ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪರೀಕ್ಷೆಗಳು ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆಟದೊಂದಿಗೆ ಓದಿನೆಡೆಗೂ ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ಪರೀಕ್ಷೆಗೆ ವಿಶೇಷವಾಗಿ ತಯಾರಿ ನಡೆಸಬೇಕು ಎಂದು ಸಲಹೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಪುಟ್ಟರಾಜ್ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮವಾದ ಶೈಕ್ಷಣಿಕ ವಾತಾವರಣ ವಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಶಿರಂಗಾಲ ಗ್ರಾಪಂ ಅಧ್ಯಕ್ಷೆ ಕೆ.ಜೆ.ಗೀತಾ ಉದ್ಘಾಟಿಸಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
7ನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸೋಮಯ್ಯ, ಪ್ರಾಂಶುಪಾಲೆ ಎ.ಎಸ್.ಶ್ರೀಲತಾ, ಎಸ್‌ಡಿಎಂಸಿ ಅಧ್ಯಕ್ಷ ಎನ್.ಆರ್.ರಘು, ಕಾಲೇಜು ಅಭಿವೃದ್ಧಿ ಸಮಿತಿಯ ಖಜಾಂಚಿ ಎನ್.ಸಿ.ಶ್ರೀಧರ್, ಪ್ರಮುಖರಾದ ಸಿ.ಎನ್.ಲೋಕೇಶ್, ಎಸ್.ಎಲ್.ತಮ್ಮಯ್ಯ, ಎಸ್.ಎಸ್.ಕೃಷ್ಣ, ಎಸ್.ಎಸ್.ಮಹೇಶ್, ಎಸ್.ಯು.ರುದ್ರಪ್ಪ, ಉಪನ್ಯಾಸಕರಾದ ಹಂಡರಂಗಿ ನಾಗರಾಜ್, ಆರ್.ಡಿ.ಲೋಕೇಶ್, ಶಿವಕುಮಾರ್, ಕವಿತಾ ಇತರರು ಉಪಸ್ಥಿತರಿದ್ದರು.