ಜಿಲ್ಲೆ

ಆಟಕ್ಕೂ, ಲೆಕ್ಕಕ್ಕಿಲ್ಲದೆ `ಮುಂದೂಡಿ'ದ ಸಭೆ

ಕಲಬುರಗಿ: ನಿಯಮದ ಪ್ರಕಾರ ಹಿಂದಿನ ಸಾಮಾನ್ಯ ಸಭೆಯಲ್ಲಿನ ಮುಂದೂಡಿದ ಅಂಶಗಳನ್ನು ಇಟ್ಟುಕೊಂಡು ವಿಶೇಷ ಸಾಮಾನ್ಯ ಸಭೆ ಕರೆಯಲು ಸಾಧ್ಯವಿಲ್ಲ. ಹೇಗೆ ಈ ಸಭೆ ಕರೆದಿದ್ದೀರಿ? ಯಾವ ನಿಯಮವಿದೆ ತಿಳಿಸಿ… ಹೀಗೊಂದು ಪ್ರಶ್ನೆಗೆ ಉತ್ತರವಾಗಿ ಚರ್ಚೆ ನಡೆಸಿ, ಸಭೆಯನ್ನೇ ಮುಂದೂಡುವ ಮೂಲಕ ಕರೆದ ಮಹಾನಗರ ಪಾಲಿಕೆ ವಿಶೇಷ ಸಾಮಾನ್ಯ ಸಭೆ ಅಂತ್ಯವಾಯಿತು.

ನಗರದ ಇಂದಿರಾ ಭವನದಲ್ಲಿ ಸೋಮವಾರ ಸರ್ವ ಸದಸ್ಯರ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು. ಕಾರ್ಯಸೂಚಿಯಲ್ಲಿ ನಗರದ ಎಲ್ ಆ್ಯಂಡ್ ಟಿ ಏಜೆನ್ಸಿಯ ಯೋಜನೆ, ಸಿಸಿಎಂಎಸ್ ಯೋಜನೆ ಕುರಿತು ಚರ್ಚೆ (ಮುಂದೂಡಿದ ಅಂಶಗಳು) ಎಂದು ನಿರ್ಧರಿಸಲಾಗಿತ್ತು. ಆದರೆ ವಿಶೇಷ ಸಭೆಯನ್ನು ಅನಾಹುತ, ಅವಘಡ, ತುರ್ತು ಪರಿಸ್ಥಿತಿ ಸೇರಿ ಇತರ ವಿಶೇಷ ಸಂದರ್ಭದಲ್ಲಿ ಕರೆಯಬಹುದು. ಮುಂದೂಡಿದ ಅಂಶಕ್ಕೆ ವಿಶೇಷ ಸಾಮಾನ್ಯ ಸಭೆ ಕರೆಯಲು ಅವಕಾಶವಿಲ್ಲ ಎಂದು ಹಿರಿಯ ಸದಸ್ಯ ಯಲ್ಲಪ್ಪ ನಾಯ್ಕೋಡಿ ಆಕ್ಷೇಪ ವ್ಯಕ್ತಪಡಿಸಿದರು.

ವಿಶೇಷ ಸಭೆಗೆ ಒಂದು ಮೂರಷ್ಟು ಸದಸ್ಯರ ಲಿಖಿತ ರೂಪದ ಅನುಮತಿ ಬೇಕು. ಕಳೆದ ಸಭೆಯ ಕಾರ್ಯಸೂಚಿ ಏನಾಗಿವೆ ಎಂಬ ಮಾಹಿತಿ ನೀಡಬೇಕು. ಸಾಲು ಸಾಲು ಸಮಸ್ಯೆಗಳಿವೆ. ಯಾರನ್ನು ಕೇಳಬೇಕು? ನಿಯಮ ಮೀರಿ ಸಭೆ ಏಕೆ ಮಾರುತ್ತಿದ್ದೀರಿ?. ಬೇಕಾಬಿಟ್ಟಿ ಸಭೆ ನಡೆಸಿದರೆ ಉಲ್ಲೇಖ ಆಗದೆ ಮಾನ್ಯತೆಯೇ ದೊರೆಯುವುದಿಲ್ಲ ಎಂದು ಮಾಹಿತಿ ನೀಡಿದರು.

ಆಕ್ಷೇಪಕ್ಕೆ ಧ್ವನಿಗೂಡಿಸಿದ ಪ್ರತಿ ಪಕ್ಷ ನಾಯಕ ಅಜ್ಮಲ್ ಗೋಲಾ, ಅಧಿಕಾರಿಗಳು ಎಲ್ಲ ಸದಸ್ಯರ ಮರ್ಯಾದೆ ತೆಗೆಯುತ್ತಿದ್ದಾರೆ. ಇದು ನಿಯಮ ರೂಪಿಸುವ ಜವಾಬ್ದಾರಿಯುತ ಸಭೆ. ಇದಕ್ಕೆ ಘನತೆ ಇಲ್ಲದಂತೆ ಮಾಡುವುದು ಸರಿಯಲ್ಲ. ಮುಂದೂಡಿದ ಅಂಶಗಳ ಕುರಿತು ಸಭೆ ಎಂದು ದಾರಿ ತಪ್ಪಿಸಲಾಗುತ್ತಿದೆ. ಹೀಗೆ ಅವಕಾಶವೇ ಇಲ್ಲ. ಸಭೆ ಮುಂದೂಡಿ ನಿಯಮದ ಪ್ರಕಾರ ಸಭೆ ಕರೆದು ವಿಷಯಗಳನ್ನು ಚರ್ಚಿಸಬೇಕು ಎಂದು ಸಲಹೆ ನೀಡಿದರು.

ಮೇಯರ್ ವಿಶಾಲ ದರ್ಗಿ ಮಾತನಾಡಿ, ನಗರದಲ್ಲಿ ನೀರಿನ ಗಂಭೀರ ಸ್ಥಿತಿ ಇದೆ. ಹಿಂದಿನ ಸಭೆಯ ಕಾರ್ಯಸೂಚಿಯಂತೆ ಮುಂದುವರಿದ ವಿಷಯಗಳಿಗಾಗಿ ಸಭೆ ಕರೆಯಲಾಗಿದೆ. ಸಹಕಾರ ಕೊಡಿ ಎಂದು ವಿನಂತಿಸಿದರು. ಸದಸ್ಯ ಯಲ್ಲಪ್ಪ ನಾಯ್ಕೋಡಿ ಮಾತನಾಡಿ, ನಿಯಮದ ಪ್ರಕಾರ ಮಾನ್ಯತೆಯೇ ಇಲ್ಲದ ಸಭೆಯಲ್ಲಿ ಏನೇ ಚರ್ಚಿಸಿದರೂ ವ್ಯರ್ಥ ಸಭೆಗೆ ಬೇರೆ ದಿನಾಂಕ ನಮೂದಿಸಿ ಎಂದು ಸಲಹೆ ಕೇಳಿ ಬಂತು.

ಸಭೆಯನ್ನು ಮುಂದೂಡಿದ ಮೇಯರ್ ಅಂತಿಮವಾಗಿ, ಸೋಮವಾರ ಮಧ್ಯಾಹ್ನ ಸಲಹಾ ಸಮಿತಿ ಕರೆದು, ಕಾರ್ಯಸೂಚಿ ನಿಗದಿಪಡಿಸಿ, ಸದಸ್ಯರಿಗೆ ಮಾಹಿತಿ ನೀಡಿ, ಮುಂದಿನ ಸಭೆಯನ್ನು ನಿಗದಿಪಡಿಸಲಾಗುವುದು ಎಂದು ತಿಳಿಸುವುದರೊಂದಿಗೆ ಸಭೆ ಅಂತ್ಯವಾಯಿತು.

ಶಾಸಕರಾದ ಬಸವರಾಜ ಮತ್ತಿಮಡು, ಅಲ್ಲಮಪ್ರಭು ಪಾಟೀಲ್, ಎಂಎಲ್ಸಿಗಳಾದ ಡಾ.ಚಂದ್ರಶೇಖರ ಪಾಟೀಲ್, ತಿಪ್ಪಣಪ್ಪ ಕಮಕನೂರ, ಉಪ ಮೇಯರ್ ಶಿವಾನಂದ ಪಿಸ್ತಿ, ಆಯುಕ್ತ ಭುವನೇಶ ದೇವಿದಾಸ ಪಾಟೀಲ್, ಅಧಿಕಾರಿಗಳಾದ ಆರ್.ಪಿ.ಜಾಧವ್ ಇತರರಿದ್ದರು.