ಜಿಲ್ಲೆ

ಆಟಕ್ಕೂ, ಆಡಳಿತಕ್ಕೂ ಸೈ

ಸದಾ ಕರ್ತವ್ಯ ನಿರ್ವಹಣೆಯ ಒತ್ತಡ, ಸಾರ್ವಜನಿಕರಿಗೆ ಸಂಬಂಧಿಸಿದ ನೂರಾರು ಸಮಸ್ಯೆಗಳ ನಿರ್ವಹಣೆಯ ಅವಸರದಲ್ಲಿರುವ ಅಧಿಕಾರಿ- ಸಿಬ್ಬಂದಿ ವರ್ಗ,  ಜನರ ಅಪೇಕ್ಷೆಯ ಮಟ್ಟ ಹಾಗೂ ಪಕ್ಷದ ಮುಖಂಡರ ನಿರ್ದೇಶನ ಮಟ್ಟಕ್ಕೆ ಕೆಲಸ ಮಾಡಬೇಕಾಗಿರುವ ಅನಿವಾರ್ಯತೆಯಲ್ಲಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗವನ್ನು ನಗರದ ಮಂಗಳಾ ಕ್ರಿಡಾಂಗಣದಲ್ಲಿ ಶನಿವಾರ ನಡೆದ ಜಿ.ಪಂ., ತಾ.ಪಂ. ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಕ್ರೀಡಾಕೂಟ ಒಂದುಗೂಡಿಸಿತು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಂಗಳೂರು ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಕ್ರೀಡಾಕೂಟ ಜರುಗಿತು.
ಮುಖ್ಯ ಅತಿಥಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ ಮಾತನಾಡಿ, ಸಾಮರಸ್ಯ, ಸಮನ್ವಯತೆಯಿಂದ ತಂಡವಾಗಿ ಕಚೇರಿ ಕೆಲಸ ನಡೆಯಬೇಕು. ಎಲ್ಲ ವಿಭಾಗದ ಜನರು ಜೊತೆಯಾಗಿ ಕೆಲಸ ಮಾಡಲು ಕ್ರೀಡೆಯು ಪ್ರೆರಣೆ ನೀಡುತ್ತದೆ ಎಂದರು.
ಉದ್ಘಾಟನೆ ನಿರ್ವಹಿಸಿ ಮಾತನಾಡಿದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕ್ರೀಡೆ ಅಂದ ಮೇಲೆ ಸೋಲು ಗೆಲುವು ಇದ್ದದ್ದೇ. ಗೆದ್ದರೆ ಹಿಗ್ಗದೆ, ಸೋತರೆ ಕುಗ್ಗದೆ ಮರಳಿ ಪ್ರಯತ್ನ ಮಾಡಬೇಕು. ಯಾವುದೇ ಕೆಲಸದ ಯಶಸ್ಸಿಗೆ ಆತ್ಮ ವಿಶ್ವಾಸ ಅತೀ ಮುಖ್ಯ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಪರಿಕಲ್ಪನೆಯಂತೆ ಈ ಕ್ರೀಡಾಕೂಟಗಳು ನಡೆಯುತ್ತಿದ್ದು, ಸರ್ಕಾರಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಿದೆ ಎಂದರು.
ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ದ.ಕ. ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿಗಟ್ಟಿ, ಮನಪಾ ಸದಸ್ಯೆ ಸಂಧ್ಯಾ ಎಂ. ಆಚಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜಾ, ಕಡಬ ತಾ.ಪಂ. ಅಧ್ಯಕ್ಷೆ ರಾಜೇಶ್ವರಿ, ಜಿ.ಪಂ. ಸದಸ್ಯ ಸುಚರಿತ್ ಶೆಟ್ಟಿ ಉಪಸ್ಥಿರಿದ್ದರು.