ಜಿಲ್ಲೆ

ಆಚಾರ-ವಿಚಾರಗಳಿಂದ ದೊಡ್ಡವರಾಗಿ

ಕುರುಗೋಡು: ಮತ್ತೊಬ್ಬ ಪ್ರಭಾವಿ ವ್ಯಕ್ತಿಯ ಹೆಸರು ಹೇಳಿಕೊಂಡು ದೊಡ್ಡರಾಗುವುದಕ್ಕಿಂತ ಮೊದಲು ನಮ್ಮನ್ನು ನಾವು ಪರಿಚಯಮಾಡಿಕೊಳ್ಳುವಂಥ ಆದರ್ಶ ಜೀವನ ಕಟ್ಟಿಕೊಳ್ಳಬೇಕು ಎಂದು ಎಮ್ಮಿಗನೂರಿನ ಹಂಪಿ ಸಾವಿರದೇವರು ಮಠದ ವಾಮದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬಾದನಹಟ್ಟಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶನಿವಾರ ಆಶೀರ್ವಚನ ನೀಡಿದರು. ಡಾಂಭಿಕ ಜೀವನದಿಂದ ಸಮಾಜದಲ್ಲಿ ನಮ್ಮ ಪರಿಚಯವಾಗುವುದಿಲ್ಲ. ಗುರು ಸಾನ್ನಿಧ್ಯ ಪಡೆದು ನಡೆ-ನುಡಿ, ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡು ದೊಡ್ಡವರಾಗಬೇಕು. ಪೃಥ್ವಿ ತತ್ವದ ಗೋತ್ರಪುರುಷನಾಗಿರುವ ತಿಪ್ಪೇರುದ್ರಸ್ವಾಮಿಯ ಗಂಧ ನಿಮಗೆಲ್ಲ ಪರಿಮಳವಾಗಿ ಪಸರಿಸಲಿ. ಪುರಾಣ ಪುಣ್ಯಕಥೆಗಳ ಶ್ರವಣ ನಿಮ್ಮ ಬಾಳಿಗೆ ಬೆಳಕಾಗಲಿ ಎಂದರು.

ಕೆ.ಮೌನೇಶ್ ಆಚಾರ್ ಪುರಾಣ ಪ್ರವಚನ ಪ್ರಸ್ತುತ ಪಡಿಸಿದರು. ಪಿ.ಮಂಜುನಾಥ ಪುರಾಣ ಪಠಣ ಮಾಡಿದರು. ವೈ.ನಾಗೇಶ್ ಸಂಗೀತ ಸಾಥ್ ನೀಡಿದರು. ಕೆ.ಕರಿಬಸವನಗೌಡ ಹಾರ್ಮೋನಿಯಂ, ಎಚ್.ಮಲ್ಲಿಗೌಡ ಮತ್ತು ಎಂ.ಪಾಂಡುರಂಗ ತಬಲಾ ಸಾಥ್ ನೀಡಿದರು.

ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನಡೆದವು. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಹೂ, ಹಣ್ಣು, ಕಾಯಿ ಸಮರ್ಪಿಸಿ ವೀರಭದ್ರೇಶ್ವರ ಸ್ವಾಮಿ ದರ್ಶನ ಪಡೆದು ಪುನೀತರಾದರು.