ಜಿಲ್ಲೆ

ಆಗ್ನೇಯ ಪದವೀಧರ ಕ್ಷೇತ್ರ: ಶೇ. 79.48 ರಷ್ಟು ಮತದಾನ

ಕೋಲಾರ
ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 79.48 ರಷ್ಟು ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಜಿಲ್ಲೆಯ 6 ತಾಲೂಕುಗಳಲ್ಲಿ ಒಟ್ಟು 36 ಮತದಾನ ಕೇಂದ್ರಗಳನ್ನು ತೆರೆಯಲಾಗಿತ್ತು. 13,008 ಪುರುಷರು, 8,434 ಮಹಿಳೆಯರು ಸೇರಿ ಒಟ್ಟು 21,442 ಮತದಾರರಿದ್ದು, ಈ ಪೈಕಿ 10,525 ಪುರುಷರು,6518 ಮಹಿಳೆಯರು ಸೇರಿ 17043 ಮಂದಿ ಹಕ್ಕು ಚಲಾಯಿಸಿದ್ದಾರೆ. ಮಾಲೂರಿನಲ್ಲಿ ಅತೀ ಹೆಚ್ಚು ಮತದಾನವಾದರೆ ಜಿಲ್ಲಾ ಕೇಂದ್ರ ಕೋಲಾರದಲ್ಲಿ ಶೇ. 75.46 ಅಂದರೆ ಅತಿ ಕಡಿಮೆ ಹಕ್ಕು ಚಲಾವಣೆಯಾಗಿದೆ.
ಶ್ರೀನಿವಾಸಪುರದಲ್ಲಿ ಶೇ 81.47, ಮುಳಬಾಗಿಲಿನಲ್ಲಿ ಶೇ.79.26, ಕೋಲಾರದಲ್ಲಿ ಶೇ.75.46, ಮಾಲೂರಿನಲ್ಲಿ ಶೇ.85.14, ಬಂಗಾರಪೇಟೆಯಲ್ಲಿ ಶೇ.79.73 ಹಾಗೂ ಕೆಜಿಎಫ್‍ನಲ್ಲಿ ಶೇ.82.18 ರಷ್ಟು ಮತದಾನವಾಗಿದೆ.
ಜೆಡಿಎಸ್ ಅಭ್ಯರ್ಥಿ,ಕೋಲಾರದವರೇ ಆದ ಮಾಜಿ ಸದಸ್ಯ ಆರ್. ಚೌಡರೆಡ್ಡಿ ಕಣದಲ್ಲಿದ್ದುದರಿಂದ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಕ್ಷೇತ್ರದಲ್ಲಿ ತಮ್ಮ ತಮ್ಮ ಅಭ್ಯರ್ಥಿಗಳಿಗೆ ಹೆಚ್ಚು ಮತ ಕೊಡಿಸಲು ಮತಬೇಟೆಗೆ ಪೈಪೋಟಿಗಿಳಿದಿದ್ದರು.
ಬೆಳಗ್ಗೆಯೇ ಕೋಲಾರದ ಜೂನಿಯರ್ ಕಾಲೇಜಿನ ಮತಕೇಂದ್ರಕ್ಕೆ ಬಂದಿದ್ದ ಕಾಂಗ್ರೆಸ್ ಅಭ್ಯರ್ಥಿ ರಮೇಶ್‍ಬಾಬು ಬೂತ್‍ನ 100 ಮೀಟರ್ ಒಳಗೆ ಮತಯಾಚನೆ ಮಾಡಿದ ಕಾರಣಕ್ಕೆ ಪೊಲೀಸರು ಆಕ್ಷೇಪಿಸಿದಾಗ ಕಾಂಗ್ರೆಸ್ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಉಳಿದಂತೆ ಶಾಂತಿಯುತ ಮತದಾನವಾಗಿದೆ.
ಬಿಜೆಪಿ ಪರವಾಗಿ ಸಂಸದ ಎಸ್.ಮುನಿಸ್ವಾಮಿ, ಎಮ್ಮೆಲ್ಸಿ ವೈ.ಎ.ನಾರಾಯಣಸ್ವಾಮಿ, ಸಚಿವ ಡಾ. ಸುಧಾಕರ್, ಜೆಡಿಎಸ್ ಪರ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ವಿವಿಧ ಮತಗಟ್ಟೆಗೆ ತೆರಳಿ ಮತದಾನದ ಕುರಿತ ಮಾಹಿತಿ ಪಡೆದುಕೊಂಡರು.