ಜಿಲ್ಲೆ

ಆಗುಂಬೆ ಸಮೀಪ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಪಲ್ಟಿ

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಗೌರಿ ಹಕ್ಲುವಿನ ಬಳಿ ಸೋಮವಾರ ಶವ ಸಾಗಿಸುತ್ತಿದ್ದ ಖಾಸಗಿ ಆಂಬುಲೆನ್ಸ್ ಪಲ್ಟಿಯಾಗಿದ್ದು ನಾಲ್ವರು ಗಾಯಗೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲೂಕಿನ ಬಾವಿಕೆರೆಯ ಜ್ಯೋತಿ ಬಾಯಿ, ರವಿ ನಾಯ್ಕ, ಶ್ಯಾಮನಾಯ್ಕಾ ಮತ್ತು ಆಂಬುಲೆನ್ಸ್ ಚಾಲಕ ಬೆಳ್ತಂಗಡಿಯ ಕೇಶವ ಗಾಯಗೊಂಡಿದ್ದಾರೆ.

ಬಾವಿಕೆರೆಯ ರಾಮಾನಾಯ್ಕ (68) ಅವರು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದು ಆಗುಂಬೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಆ್ಯಂಬುಲೆನ್ಸ್ ಮುಂಭಾಗ ನುಜ್ಜುಗುಜ್ಜಾಗಿದೆ. ಆಂಬುಲೆನ್ಸ್‌ನ ಜಾಯಿಂಟ್ ವೀಲ್ ತುಂಡಾಗಿ ಪಲ್ಟಿಯಾಗಿದೆ ಎಂದು ಶಂಕಿಸಲಾಗಿದೆ.

ಗಾಯಾಳುಗಳಿಗೆ ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು ರವಿನಾಯ್ಕ ಮತ್ತು ಶ್ಯಾಮನಾಯ್ಕಾನನ್ನು ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಘಾತದ ಬಳಿಕ ಮೃತದೇಹವನ್ನು ಬೇರೊಂದು ವಾಹನದಲ್ಲಿ ಬಾವಿಕೆರೆಗೆ ಕೊಂಡೊಯ್ಯಲಾಯಿತು. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.