ಜಿಲ್ಲೆ

ಆಕ್ಸಿಜನ್ ಸಂತ್ರಸ್ತರಿಗೆ ಮತ್ತೊಮ್ಮೆ ಭರವಸೆ

ಚಾಮರಾಜನಗರ: ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಕೊಟ್ಟ ಭರವಸೆ ಈಡೇರಿಸಬೇಕೆಂದು ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಪಕ್ಷದ ನಾಯಕರು ಒಬ್ಬರ ನಂತರ ಮತ್ತೊಬ್ಬರಂತೆ ಕೊಡುತ್ತಿರುವ ಆಶ್ವಾಸನೆಗಳ ನಡುವೆ ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಕಡೆಯಿಂದಲೂ ವಾಗ್ದಾನ ಸಿಕ್ಕಿದೆ.

ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಎಸ್‌ಡಿಪಿಐ ಪಕ್ಷ ಅವಿರತ ಹೋರಾಟ ನಡೆಸುತ್ತಿದೆ. ಇದಕ್ಕೆ ಪ್ರಗತಿಪರ ಹೋರಾಟಗಾರರು ಮಾನವೀಯತೆಯಿಂದ ಕೈ ಜೋಡಿಸಿ ಹೋರಾಟವನ್ನು ದೊಡ್ಡಮಟ್ಟದಲ್ಲಿ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಜು.15ರಂದು ಚಾಮರಾಜನಗರ ಬಂದ್‌ಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಸೋಮವಾರ ಸಂತ್ರಸ್ತರು, ಹೋರಾಟಗಾರರ ಸಭೆ ನಡೆಯಿತು. ಶೀಘ್ರದಲ್ಲೇ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಸಚಿವ ಕೆ.ವೆಂಕಟೇಶ್ ಭರವಸೆ ನೀಡಿದರು.

ಕೆಲವು ದಿನಗಳ ಹಿಂದೆ ಸಂತ್ರಸ್ತರು ತಮಗೆ ಕೊಟ್ಟಿದ್ದ ಪರಿಹಾರ ಹಣವನ್ನು ವಾಪಸ್ ಕೊಡುವುದಾಗಿ ೋಷಿಸಿದ್ದರು. ಆಗ ಸಂಸದ ಸುನೀಲ್‌ಬೋಸ್, ಶಾಸಕ ಸಿ.ಪುಟ್ಟರಂಗಶೆಟ್ಟಿ ಸಭೆ ಕರೆದು ಸಂತ್ರಸ್ತರ ಅಳಲನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದ್ದರು. ಇದಾದ ಮೇಲೆ ಸಚಿವ ಕೆ.ವೆಂಕಟೇಶ್ ಆಶ್ವಾಸನೆ ನೀಡಿದ್ದಾರೆ. ಇದು ಈಡೇರುವುದೋ ಅಥವಾ ಹೋರಾಟಗಾರರು ಬೀದಿಗಿಳಿಯುವರೋ ಕಾದು ನೋಡಬೇಕಾಗಿದೆ.

ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಮುಖಂಡರು ಸಭೆಯಲ್ಲಿ ಮಾತನಾಡಿದ ಹಲವು ಮುಖಂಡರು ಸರ್ಕಾರಕ್ಕೆ ಮಾತಿನಲ್ಲೇ ಚಾಟಿ ಬೀಸಿದರು.

ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ, ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಎಸ್‌ಡಿಪಿಐ ಮುಖಂಡ ಅಬ್ರಾಹರ್ ಅಹಮದ್ ಮಾತನಾಡಿ, ಭಾರತ್ ಜೋಡೋ ಯಾತ್ರೆಯಲ್ಲಿ ಅಂದು ಡಿ.ಕೆ.ಶಿವಕುಮಾರ್ ಕಣ್ಣೀರು ಹಾಕಿದ್ದು ನಾಟವೇ?. ಸಂತ್ರಸ್ತರು ಚಾಮರಾಜನಗರದಲ್ಲಿದ್ದಾರೆ. ಕುನ್ಹಾ ಆಯೋಗದ ಕಚೇರಿ ಬೆಂಗಳೂರಿನಲ್ಲಿದೆ ಎಂದರು.

ಹೋರಾಟಗಾರ ಗೋವಿಂದರಾಜು ಮಾತನಾಡಿ, ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತಕ್ಕೆ ಒಂದು ಪರಿಹಾರ, ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಒಂದು ಪರಿಹಾರ ನೀಡಲಾಗಿದೆ. ನಾವು ವಯನಾಡಿಗೆ ಭೇಟಿ ನೀಡಿ ಪ್ರಿಯಾಂಕಾ ಗಾಂಧಿ ಅವರ ಬಳಿ ಈ ಸರ್ಕಾರ ಮಣ್ಣು ತಿನ್ನುವ ಕೆಲಸ ಮಾಡಿರುವುದನ್ನು ತಿಳಿಸುತ್ತೇವೆ ಎಂದರು.

ಹಿರಿಯ ಸಾಹಿತಿ ಕೆ.ವೆಂಕಟರಾಜು ಮಾತನಾಡಿ, ಆಕ್ಸಿಜನ್ ದುರಂತರದ ಸಾವುಗಳು ಕೊಲೆ. ಮಾನವೀಯತೆ ದೃಷ್ಟಿಯಲ್ಲಿ ಪರಿಹಾರ ನೀಡಿ ಎಂದು ಒತ್ತಾಯಿಸಿದರು. ಮುಖಂಡ ಅರಕಲವಾಡಿ ನಾಗೇಂದ್ರ ಮಾತನಾಡಿ, 4 ವರ್ಷಗಳೇ ಕಳೆದರೂ ಪ್ರಕರಣದ ಮುಕ್ತ ವರದಿ ಕೊಟ್ಟಿಲ್ಲ. ಜೀವ ರಕ್ಷಣೆ ಮಾಡಬೇಕಾದ ಪ್ರಭುತ್ವ, ಜೀವ ಕಳೆದವರ ರಕ್ಷಣೆ ಮಾಡುತ್ತಿದೆ ಎಂದರು.

ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಮಾನವೀಯ ದೃಷ್ಟಿಯಿಂದ ಪರಿಹಾರ ಮತ್ತು ನ್ಯಾಯ ಒದಗಿಸಿ ಎಂದು ಆಗ್ರಹಿಸಿದರು. ಪರಿಸರವಾದಿ ಪುಣಜನೂರು ದೊರೆಸ್ವಾಮಿ ಮಾತನಾಡಿ, ಆಕ್ಸಿಜನ್ ದುರಂತದ ತನಿಖಾ ವರದಿಗಳನ್ನು ನೀಡಿ. ಯಾರಿಗೆ ಎಷ್ಟು ಪರಿಹಾರ ನೀಡಿದ್ದೀರಾ? ಎಂದು ಬಹಿರಂಗ ಪಡಿಸಿ ಎಂದು ಒತ್ತಾಯಿಸಿದರು. ರೈತ ಮುಖಂಡ ಗುರುಪ್ರಸಾದ್ ಮಾತನಾಡಿ, ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಜಿಪಂ ಸಿಇಒ ಮೋನಾ ರೋತ್ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಸಂತ್ರಸ್ತರು ಇದ್ದರು.

ತಡವಾಗಿರುವುದನ್ನು ಒಪ್ಪುತ್ತೇನೆ:

ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವಲ್ಲಿ ತಡವಾಗಿರುವುನ್ನು ಒಪ್ಪುತ್ತೇನೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು.

ಹಾಗೆಂದು ಸರ್ಕಾರ ಏನು ಮಾಡಿಲ್ಲ ಎಂದು ವಾದ ಮಾಡಿದರೆ ಸರಿಯಲ್ಲ. ಸಂತ್ರಸ್ತರಿಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸಿದ್ದೇವೆ. ಸರ್ಕಾರಿ ಉದ್ಯೋಗ ನೀಡಲು ಕ್ಯಾಬಿನೆಟ್‌ನಲ್ಲಿ ಚರ್ಚಿಸಲು ಆಗಲಿಲ್ಲ. ಕಾನೂನು ವಿಭಾಗದ ಒಪ್ಪಿಗೆಗೆ ಕಳುಹಿಸಲಾಗಿದೆ. ಇದಕ್ಕೆ ಅನುಮತಿ ಸಿಕ್ಕ ಕೂಡಲೇ ಉದ್ಯೋಗ ನೀಡಲಾಗುವುದು. ಹಿಂದಿನ ಘಟನೆಗಳನ್ನು ಹೋಲಿಕೆ ಮಾಡಲು ಆಗುವುದಿಲ್ಲ. ಹೆಚ್ಚಿನ ಪರಿಹಾರದ ಬೇಡಿಕೆಯನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ ಎಂದರು.

ಶಾಸಕರ ಮಾತಿಗೆ ಸಿಡಿಮಿಡಿ:

ಸಭೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಮಾತು ಮುಖಂಡರನ್ನು ಸಿಡಿಮಿಡಿಗೊಳಿಸಿತು. ಆಕ್ಸಿಜನ್ ಸಂತ್ರಸ್ತರ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಸಿಎಂ ಗಮನಕ್ಕೆ ತಂದಿದ್ದೇನೆ ಎಂದ ಅವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ಕೊಟ್ಟ ಮೇಲೆ ಪ್ರಕ್ರಿಯೆ ಶುರುವಾಯಿತು. ದುರಂತದಲ್ಲಿ 3 ಜನ ಸತ್ತಿದ್ದಾರೆ ಎಂದು ಹಿಂದಿನ ಸರ್ಕಾರ ಹೇಳಿತ್ತು. ಆವತ್ತು ನೀವು ಯಾರೂ ಇರಲಿಲ್ಲ. ಹೋರಾಟ ಮಾಡಲಿಲ್ಲ ಎಂದಾಗ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಈ ಹೋರಾಟದಲ್ಲಿ ಎಸ್‌ಡಿಪಿಐ ಅಧ್ಯಕ್ಷರು ಮತ್ತು ಮಹೇಶ್ ಅವರನ್ನು ಈ ಹೋರಾಟದಲ್ಲಿ ಕಂಡಿದ್ದೆ. ನಾನು ಸಂತ್ರಸ್ತೆಯೊಬ್ಬರಿಗೆ ನಗರಸಭೆಯಲ್ಲಿ ಕೆಲಸ ಕೊಡಿಸಿದ್ದೇನೆ. ಸರ್ಕಾರಿ ಉದ್ಯೋಗ ನೀಡಲು ಕಾನೂನುಗಳಿವೆ. ವಿದ್ಯಾರ್ಹತೆ, ದಾಖಲೆಗಳನ್ನು ಪರಿಶೀಲನೆ ಮಾಡಬೇಕು ಎಂದರು.

ಕಣ್ಣೀರು ಹಾಕಿದ ಸಂತ್ರಸ್ತೆ: ನಾಲ್ಕು ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿದ್ದೇವೆ. ತಂದೆ, ಅತ್ತೆ ಮನೆಯವರು ನೋಡಿಕೊಳ್ಳಲು ಆಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರನ್ನು 5 ಬಾರಿ ಭೇಟಿ ಮಾಡಿ ಮನವಿ ಮಾಡಿದ್ದೇವೆ. ನಮ್ಮ ಮಕ್ಕಳನ್ನು ನಾವು ನೋಡಿಕೊಳ್ಳುವಷ್ಟು ಶಕ್ತಿ ಕೊಡಿ ಎಂದು ಸಂತ್ರಸ್ತೆ ನಾಗರತ್ನ ಕಣ್ಣೀರು ಹಾಕಿದರು.

ಸಚಿವ ಕೆ.ವೆಂಕಟೇಶ್ ಅವರ ಮುಂದೆ ಸಂತ್ರಸ್ತರಿಗೆ ಸರ್ಕಾರಿ ನೌಕರಿ ಮತ್ತು 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದೇವೆ. ಅವರು ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದಾರೆ. ನಾವು 4 ವರ್ಷ ಕಾದಿದ್ದೇವೆ. ಇನ್ನೊಂದು 15 ದಿನ ಕಾಯುತ್ತೇವೆ. ಮುಂದಿನ ಕ್ಯಾಬಿನೆಟ್‌ನಲ್ಲಿ ನಮ್ಮ ಬೇಡಿಕೆ ಈಡೇರಬೇಕು. ಇಲ್ಲದಿದ್ದರೆ ಚಾಮರಾಜನಗರ ಬಂದ್ ಮಾಡಿಸುತ್ತೇವೆ. ಸಿ.ಎಂ.ಕೃಷ್ಣಮೂರ್ತಿ ಹಿರಿಯ ಹೋರಾಟಗಾರ