ಬಾಗಲಕೋಟೆ: ಜಿಲ್ಲೆಯ ವ್ಯಾಪ್ತಿಯಲ್ಲಿ ಬಾಗಲಕೋಟೆ ತಾಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ತಾತ್ಕಾಲಿಕ ಆಯ್ಕೆ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ಜೂನ್ 4 ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ಬಾಗಲಕೋಟೆ ತಾಲೂಕು ಹೊತರುಪಡಿಸಿ, ಬೀಳಗಿ, ಬಾದಾಮಿ, ಮುಧೋಳ, ಜಮಖಂಡಿ ಹಾಗೂ ಹುನಗುಂದ ತಾಲೂಕಿನಲ್ಲಿ ಖಾಲಿ ಇರುವ 101 ಅಂಗನವಾಡಿ ಕಾರ್ಯಕರ್ತೆ ಹಾಗೂ 454 ಸಹಾಯಕಿಯರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಪಟ್ಟಿಯನ್ನು ಉಪ ನಿರ್ದೇಶಕರ ಕಚೇರಿ, ಆಯಾ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯ ಸೂಚನಾ ಫಲಕ ಹಾಗೂ ಸಂಬಂಧಿಸಿದ ಅಂಗನವಾಡಿ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ ಎಂದರು.
ಈ ತತ್ಕಾಲಿಕ ಅಭ್ಯರ್ಥಿಗಳ ಆಯ್ಕೆ ಪಟ್ಟಿಯ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಇದ್ದಲ್ಲಿ ಮೇ 27 ರಿಂದ ಜೂನ್ 4ರ ಒಳಗಾಗಿ ಕಚೇರಿ ಅವಧಿಯಲ್ಲಿ ಲಿಖಿತವಾಗಿ ಸಮರ್ಥನೀಯ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಸಂಬಂಧಿಸಿದ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಅಥವಾ ಉಪ ನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಬಾಗಲಕೋಟೆ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.