ಜಿಲ್ಲೆ

ಆಕ್ಷೇಪಣೆ ಸಲ್ಲಿಸಲು ಬಿಡಿಎ ಅವಕಾಶ

Bidar

ಬೀದರ್: ನಗರದ ಹೊರವಲಯದ ಗೋರನಳ್ಳಿ ಸಮೀಪದ ಬಿ.ಎಸ್. ಯಡಿಯೂರಪ್ಪ ಬಡಾವಣೆಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವವರಿಗೆ ಆಕ್ಷೇಪಣೆ ಸಲ್ಲಿಸಲು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅವಕಾಶ ಕಲ್ಪಿಸಿದೆ.

ನಗರದ ಪ್ರಾಧಿಕಾರ ಕಚೇರಿಯಲ್ಲಿ ಅಧ್ಯಕ್ಷ ಬಾಬು ವಾಲಿ ನೇತೃತ್ವದಲ್ಲಿ ಮಂಗಳವಾರ ಆಯೋಜಿಸಿದ ಸಭೆಯಲ್ಲಿ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಯಿತು. ನಿವೇಶನ ಕುರಿತು ಏನಾದರೂ ಸಮಸ್ಯೆಗಳಿದ್ದರೆ ಈಗಾಗಲೇ ಅರ್ಜಿ ಸಲ್ಲಿಸಿದವರು ಒಂದು ವಾರದೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಶಾಸಕ ರಹೀಮ್ಖಾನ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಡಿವೈಎಸ್ಪಿ ಸತೀಶಕುಮಾರ, ಪ್ರಾಧಿಕಾರ ಆಯುಕ್ತ ಅಭಯಕುಮಾರ, ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಮೇಶ ಪಾಟೀಲ್, ನಗರ ಯೋಜನಾ ವ್ಯವಸ್ಥಾಪಕ ವಿಷ್ಣು ಭಂಡಾರಿ ಇತರರಿದ್ದರು. ಸಭೆ ನಂತರ ಯಡಿಯೂರಪ್ಪ ಬಡಾವಣೆಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಿದ ಯಡಿಯೂರಪ್ಪ ಬಡಾವಣೆಯಲ್ಲಿ ಮೊದಲ ಹಂತವಾಗಿ 188 ನಿವೇಶನ ಹಂಚಿಕೆಗೆ ಸಾರ್ವಜನಿಕರಿಂದ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. 384 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆಕ್ಷೇಪಣೆ ನಂತರ ಅರ್ಜಿಗಳನ್ನು ಪರಿಶೀಲಿಸಿ ನಿವೇಶನಗಳ ಹಂಚಿಕೆ ಅಂತಿಮಗೊಳಿಸಲಾಗುವುದು.
| ಬಾಬು ವಾಲಿ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ