ಮೈಸೂರು: ಮೈಸೂರು ಆಕಾಶವಾಣಿ ವತಿಯಿಂದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ‘ರೇಷ್ಮೆ ಐಸಿರಿ’ ಸಮಾರೋಪ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್ ಮಾತನಾಡಿ, ‘ರೇಷ್ಮೆ ಐಸಿರಿ’ ಕೇಂದ್ರ ರೇಷ್ಮೆ ಸಂಶೋಧನೆ, ತರಬೇತಿ ಸಂಸ್ಥೆ ಮತ್ತು ಮೈಸೂರು ಆಕಾಶವಾಣಿ ಸಹಯೋಗದ ಕಾರ್ಯಕ್ರಮ ಇದಾಗಿದ್ದು, 2024ರ ಜನವರಿಯಿಂದ 2025ರ ಜನವರಿ ರವರೆಗೆ ಪ್ರತಿ ಮಂಗಳವಾರ ಸಂಜೆ 6.50ಕ್ಕೆ ಮೈಸೂರು ಆಕಾಶವಾಣಿಯಲ್ಲಿ ‘ಕೃಷಿ ರಂಗದಲ್ಲಿ’ ಬಿತ್ತರವಾಗಿತ್ತು. 54 ವಾರಗಳ ಕಾಲ ರೇಷ್ಮೆ ಕೃಷಿಗೆ ಸಂಬಂಧಿಸಿದ ಸರಣಿ ಬಾನುಲಿ ಕಾರ್ಯಕ್ರಮ ಇದಾಗಿದೆ ಎಂದರು.
ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕ ಡಾ.ಎಸ್.ಗಾಂಧಿದಾಸ್ ಮಾತನಾಡಿ, ರೇಷ್ಮೆ ಐಸಿರಿ ಸರಣಿ ಬಾನುಲಿ ಕಾರ್ಯಕ ್ರಮ ರೈತರಿಗೆ ಉಪಯುಕ್ತವಾಗಿತ್ತು. ಈ ಕಾರ್ಯಕ್ರಮದ ಮೂಲಕ ರೇಷ್ಮೆ ಕೃಷಿಗೆ ಸಂಬಂಧಿಸಿದ ತಂತ್ರಜ್ಞಾನಗಳ ಪರಿಚಯವನ್ನು ರೈತರಿಗೆ ತಲುಪಿಸಲು ಆಕಾಶವಾಣಿ ಮತ್ತು ನಮ್ಮ ಸಂಸೆ ್ಥಶ್ರಮಿಸಿದೆ. ರೇಷ್ಮೆ ಕೃಷಿಗೆ ಸಂಬಂಧಿಸಿದ ತಂತ್ರಜ್ಞಾನದ ಅರಿವನ್ನು ರೈತರಿಗೆ ಮುಟ್ಟಿಸುವಲ್ಲಿ ಆಕಾಶವಾಣಿ ಪಾತ್ರ ಬಹಳಷ್ಟಿದೆ ಎಂದರು.
ಆಕಾಶವಾಣಿಯ ಉಪನಿರ್ದೇಶಕ ಉಮೇಶ್ ಮಾತನಾಡಿ, ಈ ಕಾರ್ಯಕ್ರಮ ಇಷ್ಟು ಅಚ್ಚುಕಟ್ಟಾಗಿ ಮೂಡಿ ಬಂದಿದ್ದು, ಫೋನ್ ಇನ್ ಕಾರ್ಯಕ್ರಮವು ಸಹ ಬಹಳ ಸೊಗಸಾಗಿ ಮೂಡಿಬಂದಿತ್ತು. ಎಲ್ಲ ಬಾನುಲಿ ಕಾರ್ಯಕ್ರಮಗಳು ಯು ಟ್ಯೂಬ್‌ನಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಪ್ರಗತಿಪರ ರೈತ ಪುಟ್ಟಣ್ಣ ಮಾತನಾಡಿ, ರೇಷ್ಮೆ ಬೇಸಾಯ ತಿಂಗಳಿಗೊಮ್ಮೆ ಆದಾಯ ತರುವ ಕೃಷಿಯಾಗಿದೆ ಎಂದರು. ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಎನ್.ಕೇಶವಮೂರ್ತಿ, ರೈತರಾದ ಮಾದನಾಯಕ, ರಮೇಶ, ಪುಟ್ಟಮ್ಮ, ರೇಷ್ಮೆ ವಿಜ್ಞಾನಿಗಳಾದ ಡಾ.ಮುತ್ತು ಲಕ್ಷ್ಮೀ, ಡಾ.ಕೆ.ಕುಸುಮಾ ಇದ್ದರು.