ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಯುವ ಜನೋತ್ಸವ ನಿಮಿತ್ತ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣ ಎದುರಿನಲ್ಲಿ ಸ್ಥಾಪಿಸಿರುವ ಸಿರಿಧಾನ್ಯ ಹಾಗೂ ಸಾವಯವ ಪ್ರದರ್ಶನ, ಮಾರಾಟ ಮೇಳ ಎಲ್ಲರ ಗಮನ ಸೆಳೆಯುತ್ತಿದೆ.
ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರ, ವಿವಿಧ ರೈತ ಉತ್ಪಾದಕ ಕಂಪನಿಗಳು, ಸ್ವ ಸಹಾಯ ರೈತ ಉತ್ಪಾದಕ ಕಂಪನಿಗಳು, ಸ್ವ ಸಹಾಯ ಸ್ತ್ರೀ ಶಕ್ತಿ ಗುಂಪುಗಳು, ವಿವಿಧ ಸಿರಿಧಾನ್ಯ ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಿದರು. ರಾಗಿ, ಸಜ್ಜೆ, ನವಣೆ, ಅರಕ, ಊದಲು, ಕೊರಲು, ಸಾವೆ, ಬರಗು ಸೇರಿ ಉಪ ಉತ್ಪನ್ನಗಳಾದ ಬ್ರೆಡ್, ಕುಕಿಸ್, ಮಿಲೆಟ್ ರಸ್ಕ್, ಮಿಲೆಟ್ ರೊಟ್ಟಿ ಹಿಟ್ಟು ಸೇರಿ ವಿವಿಧ 25 ಉತ್ಪನ್ನಗಳನ್ನು ಇಡಲಾಗಿದೆ.
ಶಾಸಕ ಅಮೃತ ದೇಸಾಯಿ ಶುಕ್ರವಾರ ಮೇಳಕ್ಕೆ ಚಾಲನೆ ನೀಡಿ, ಜಿಲ್ಲಾದ್ಯಂತ ಸಿರಿಧಾನ್ಯ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು. ಬಳಿಕ ಅತಿಥಿಗಳು ಸಾವಯವ ಬೆಲ್ಲದ ಚಹಾ ಹಾಗೂ ಮಿಲೆಟ್ ಗಂಜಿ ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಡಾ. ಸುರೇಶ ಇಟ್ನಾಳ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಐ.ಬಿ. ಬಿಜಾಪುರ, ಇತರರು ಇದ್ದರು.