ಮೈಸೂರು: ಆಂಬುಲೆನ್ಸ್ ಮುಂದೆ ಸಾಗಲು ದಾರಿ ಬಿಡದೆ ತೊಂದರೆ ಉಂಟು ಮಾಡಿದ್ದ ಬೈಕ್ ಸವಾರನ ವಿರುದ್ಧ ನಗರದ ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.9 ರಂದು ಹುಣಸೂರಿನಿಂದ ಮೈಸೂರಿಗೆ 108 ಆಂಬುಲೆನ್ಸ್‌ನಲ್ಲಿ ರೋಗಿಯನ್ನ ಕರೆ ತರಲಾಗುತ್ತಿತ್ತು. ಈ ಸಂದರ್ಭದಲ್ಲಿ ನಗರದ ಬಿಎಂಎಚ್ ಬಳಿ ಆಂಬುಲೆನ್ಸ್‌ಗೆ ಅಡ್ಡಬಂದ ಬೈಕ್ ಸವಾರ ಗಗನ್ ಎಂಬಾತ ಮುಂದೆ ಸಾಗಲು ಅಡ್ಡಿ ಉಂಟು ಮಾಡಿದ್ದಾನೆ. ತುರ್ತು ವಾಹನಕ್ಕೆ ಮುಂದಕ್ಕೆ ಹೋಗಲು ದಾರಿ ಬಿಟ್ಟುಕೊಡದೆ ಸತಾಯಿಸಿದ್ದಾನೆ. ಬೈಕ್ ಸವಾರನ ಈ ವರ್ತನೆಯನ್ನು ಆರೋಗ್ಯ ಕವಚ ವಾಹನದ ಸಿಬ್ಬಂದಿ ಪ್ರಕಾಶ್ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು.
ಆಂಬುಲೆನ್ಸ್ ಸಿಬ್ಬಂದಿ ವಿವಿ ಪುರಂ ಸಂಚಾರ ಠಾಣೆಗೆ ಈ ಕುರಿತು ದೂರು ನೀಡಿದ್ದು, ಇದರ ಅನ್ವಯ ಬೈಕ್ ಸವಾರನ ವಿರುದ್ಧ ತುರ್ತು ವಾಹನ ಸಂಚಾರಕ್ಕೆ ಅಡಚಣೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.