ಜಿಲ್ಲೆ

ಆಂಬುಲೆನ್ಸ್ ಬಾರದೆ ನರಳಾಡಿದ ಸೋಂಕು ಶಂಕಿತರು

ಹುಬ್ಬಳ್ಳಿ: ಕಿಮ್್ಸ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಸೋಂಕಿತರು ಹಾಗೂ ಶಂಕಿತರಿಗೆ ಚಿಕಿತ್ಸೆ ನೀಡಲು ಬೆಡ್​ಗಳು ಖಾಲಿ ಇಲ್ಲವೇ ? ಸೋಂಕಿನ ಲಕ್ಷಣಗಳಿಂದ ನರಳುತ್ತಿರುವವರನ್ನು ಆಸ್ಪತ್ರೆಗಳಿಗೆ ಕರೆದುಕೊಂಡು ಬರಬೇಡಿ ಎಂದು ಜಿಲ್ಲಾಡಳಿತ ಆದೇಶವನ್ನೇನಾದರೂ ನೀಡಿದೆಯೇ ?

ನಗರದ ಗೋಕುಲ ರಸ್ತೆಯ ಆರ್.ಎಂ. ಲೋಹಿಯಾನಗರದಲ್ಲಿ ಕರೊನಾ ಸೋಂಕಿನ ಲಕ್ಷಣಗಳಿಂದ ಬಳಲುತ್ತಿದ್ದ ಮೂವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್​ನ ಚಾಲಕ ನಿರಾಕರಿಸಿದ್ದರಿಂದ ಸಾರ್ವಜನಿಕರಲ್ಲಿ ಈ ರೀತಿಯ ಪ್ರಶ್ನೆಗಳು ಮೂಡುತ್ತಿವೆ.

ಕಿಮ್್ಸ ಹಾಗೂ ಬಿ.ಸಿ. ಹಾಸ್ಟೆಲ್​ನಲ್ಲಿ ಬೆಡ್​ಗಳು ಖಾಲಿ ಇಲ್ಲ. ಬೆಡ್ ಖಾಲಿ ಆದ ನಂತರ ನಿಮಗೆ ಫೋನ್ ಮಾಡಿ ಕರೆದುಕೊಂಡು ಹೋಗುತ್ತೇನೆಂದು ಆಂಬುಲೆನ್ಸ್ ಚಾಲಕ ಸೋಂಕು ಕಂಡುಬಂದ ಸಂಬಂಧಿಕರಿಗೆ ನೀಡಿದ ಉತ್ತರ ಸಾರ್ವಜನಿಕ ವಲಯದಲ್ಲಿ ಆತಂಕವನ್ನುಂಟು ಮಾಡಿದೆ.

ತೀವ್ರ ಜ್ವರ, ನೆಗಡಿ, ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡ ಮೂವರನ್ನು ಕರೆದುಕೊಂಡು ಹೋಗಲು ಆಂಬುಲೆನ್ಸ್ ತಡರಾತ್ರಿಯವರೆಗೂ ಬಾರದ ಕಾರಣ ಅವರೆಲ್ಲ ಆತಂಕದಲ್ಲಿಯೇ ಸಮಯ ಕಳೆಯಬೇಕಾಯಿತು.

ಆಗಿದ್ದಾದರೂ ಏನು ?: ಲೋಹಿಯಾ ನಗರದ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಶನಿವಾರ ಬೆಳಗ್ಗೆ ಕಿಮ್ಸ್​ಗೆ ದಾಖಲಿಸಲಾಗಿದೆ. ಈ ಮಧ್ಯೆ ಸೋಂಕು ದೃಢಪಟ್ಟ ವ್ಯಕ್ತಿಯ ಪತ್ನಿ ಹಾಗೂ ಇಬ್ಬರು ಮಕ್ಕಳಿಗೂ ಬೆಳಗ್ಗೆಯಿಂದಲೇ ತೀವ್ರ ಜ್ವರ, ನೆಗಡಿ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ಮನೆಯವರೆಲ್ಲ ಸೋಂಕಿನ ಲಕ್ಷಣಗಳಿಂದ ನರಳುತ್ತಿರುವುದನ್ನು ಕಂಡ ಅವರ ಸಂಬಂಧಿ ಹಾಗೂ ನೆರೆಹೊರೆಯವರು ಶನಿವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಕೋವಿಡ್ ಸಹಾಯವಾಣಿ, ಕಿಮ್ಸ್​ಗೆ ಫೋನ್ ಮಾಡಿ, ಸೋಂಕಿನ ಲಕ್ಷಣ ಇದ್ದವರ ಗಂಟಲ ದ್ರವ ಪರೀಕ್ಷೆ ಮಾಡುವಂತೆ ಹಾಗೂ ಅವರಿಗೆ ತುರ್ತು ಚಿಕಿತ್ಸೆ ನೀಡುವಂತೆ ಅಂಗಲಾಚುತ್ತಿದ್ದರು. ಆದರೆ ಇವರ ಗೋಳು ಅರಣ್ಯರೋದನದಂತಾಗಿದ್ದು, ಸಹಾಯವಾಣಿಯವರಾಗಲಿ ಅಥವಾ ಆಂಬುಲೆನ್ಸ್ ಸಿಬ್ಬಂದಿಯಾಗಲಿ ಸರಿಯಾಗಿ ಸ್ಪಂದಿಸಲಿಲ್ಲ.

ಹೆಚ್ಚುತ್ತಿರುವ ಸೋಂಕು ಹಾಗೂ ಸಿಬ್ಬಂದಿಯ ಈ ರೀತಿಯ ಬೇಜವಾಬ್ದಾರಿತನ ಸಾರ್ವಜನಿಕರಲ್ಲಿ ಅಸಮಾಧಾನವನ್ನುಂಟು ಮಾಡಿದೆ.

ಸೋಂಕಿತನ ಸಂಬಂಧಿಗಳ ಗಂಟಲ ದ್ರವ ಪರೀಕ್ಷಿಸಲು ಸೂಚಿಸುತ್ತೇನೆ. ಭಾನುವಾರ ಬೆಳಗ್ಗೆಯೇ ಲೋಹಿಯಾ ನಗರದ ಸೋಂಕಿನ ಲಕ್ಷಣ ಇದ್ದವರನ್ನು ಕಿಮ್ಸ್​ಗೆ ಕರೆದುಕೊಂಡು ಹೋಗಲಾಗುವುದು. ಅವರಲ್ಲಿಯೂ ಪಾಸಿಟಿವ್ ಕಂಡುಬಂದರೆ ಸೂಕ್ತ ಚಿಕಿತ್ಸೆ ನೀಡಲಾಗುವುದು.| ನಿತೇಶ ಪಾಟೀಲ, ಜಿಲ್ಲಾಧಿಕಾರಿ, ಧಾರವಾಡ