ಜಿಲ್ಲೆ

ಆಂತರ್ಯದ ಅದ್ಭುತ ಶಕ್ತಿ ಅರಿಯೋಣ

ದಾವಣಗೆರೆ: ನಮ್ಮ ಆಂತರ್ಯದಲ್ಲಿ ಅದ್ಭುತ ಶಕ್ತಿಯಿದೆ. ಅದನ್ನು ಬಳಸಿಕೊಂಡು ಸಾಧನೆಯ ಮಾರ್ಗದಲ್ಲಿ ಸಾಗಬೇಕು ಎಂದು ತಮಿಳುನಾಡಿನ ಉದಕಮಂಡಲ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಸ್ವಾಮಿ ರಾಘವೇಶಾನಂದಜೀ ಮಹಾರಾಜ್ ಹೇಳಿದರು.
ರಾಮಕೃಷ್ಣ ಮಿಷನ್ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಬಾಹ್ಯ ಭೋಗಗಳ ಬಗ್ಗೆ ಎಲ್ಲರಿಗೂ ಪರಿಚಯವಿರುತ್ತದೆ. ಆದರೆ ಆಂತರಿಕ ಶಕ್ತಿಯನ್ನು ಅರಿತವರು ವಿರಳ. ಅಂಥ ಬಲ ಸ್ವಾಮಿ ವಿವೇಕಾನಂದರಿಗೆ ಸಿದ್ಧಿಸಿತ್ತು ಎಂದು ತಿಳಿಸಿದರು.
ಮಾನಸಿಕ ಶಕ್ತಿಯಲ್ಲಿ ನಾವು ವಿಫಲರಾಗಿದ್ದೇವೆ. ಏಕಾಗ್ರತೆಯನ್ನು ಸಾಧಿಸಿಕೊಳ್ಳಬೇಕು. ಕೆಟ್ಟ ಚಟಗಳಿಂದ ದೂರವಿದ್ದಾಗ ಅದು ಸಾಧ್ಯವಿದೆ. ಚಿಕ್ಕಪುಟ್ಟ ಕಾರಣಗಳಿಂದ ನಮ್ಮ ಮನಸ್ಸು ದುರ್ಬಲವಾಗುತ್ತಿದೆ. ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಎಷ್ಟೇ ಹಣವಿದ್ದರೂ ಮಾನಸಿಕ ನೆಮ್ಮದಿ ಇಲ್ಲದಂಥ ಸ್ಥಿತಿ ಸಮಾಜದಲ್ಲಿದೆ ಎಂದರು.
ಸ್ವಾಮಿ ವಿವೇಕಾನಂದರು 19ನೇ ವಯಸ್ಸಿನಲ್ಲೇ ದೇವರನ್ನು ಹುಡುಕುತ್ತಾ ಹೊರಟರು. ಅವರಿಗೆ ರಾಮಕೃಷ್ಣರಂಥ ಗುರುಗಳು ಸಿಕ್ಕಿದರು. ಅವರ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಸಾಧನೆ ಮಾಡಿದರು ಎಂದು ಹೇಳಿದರು.
ಆಂತರ್ಯದ ಪ್ರಬಲ ಅಸ್ತ್ರವೇ ಸತ್ಯ. ಸತ್ಯವಂತರಾಗಿದ್ದರೆ ಇಡೀ ಜಗತ್ತು ನಮ್ಮ ಕಾಲ ಬಳಿ ಇರುತ್ತದೆ. ಆ ಶಕ್ತಿಯ ಪರಿಚಯ ನಮಗಿಲ್ಲ. ಸ್ವಾತಂತ್ರೃ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ಸತ್ಯವೇ ಪ್ರಬಲ ಅಸ್ತ್ರವಾಗಿತ್ತು. ಯುವಜನರು ಸತ್ಯದ ಪರಿಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಶುದ್ಧ ಮನಸ್ಸಿನಲ್ಲಿ ಧೈರ್ಯವಿರುತ್ತದೆ. ಪ್ರಾಮಾಣಿಕ ಜೀವನ ನಡೆಸುವ ಮೂಲಕ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಸೇವಾ ಮನೋಭಾವದಿಂದ ನಿಸ್ವಾರ್ಥ ಮನಸ್ಥಿತಿ ಬೆಳೆಯುತ್ತದೆ, ಆಗ ಭಗವಂತನ ಆಶೀರ್ವಾದ ದೊರೆಯುತ್ತದೆ ಎಂದು ತಿಳಿಸಿದರು.
ವಿಜ್ಞಾನದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹಲವು ಸಾಧನೆಗಳಾಗಿವೆ. ಅದಕ್ಕಿಂತಲೂ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳುವುದು, ಆತ್ಮಕ್ಕಿರುವ ಅನಂತ ಶಕ್ತಿ ಅರಿಯುವುದು ಬಹಳ ಮುಖ್ಯ ಎಂದು ಪ್ರತಿಪಾದಿಸಿದರು.
ಪ್ರಧಾನಿ ಮೋದಿ ಅವರು ಸ್ವಾಮಿ ವಿವೇಕಾನಂದರು ಇರುತ್ತಿದ್ದ ಕೊಠಡಿಯಲ್ಲಿ ಧ್ಯಾನ ಮಾಡಿದ ವಿಚಾರವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಬೆಂಗಳೂರಿನ ಶ್ರೀ ರಾಮಕೃಷ್ಣ ವಿದ್ಯಾರ್ಥಿ ಮಂದಿರಂನ ಮುಖ್ಯಸ್ಥ ಶ್ರೀ ಸ್ವಾಮಿ ತದ್ಯುಕ್ತಾನಂದಜೀ ಮಹಾರಾಜ್, ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಶ್ರೀ ಸ್ವಾಮಿ ನಿತ್ಯಸ್ಥಾನಂದ, ದಾವಣಗೆರೆ ರಾಮಕೃಷ್ಣ ಮಿಷನ್‌ನ ಶ್ರೀ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್, ರಾಮಕೃಷ್ಣ ಮಿಷನ್‌ನ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಟಿ.ಎಸ್. ಜಯರುದ್ರೇಶ್, ರಾಮಕೃಷ್ಣ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶಬಾಬು, ಉಪಾಧ್ಯಕ್ಷ ಶಾಂತಿನಾಥ್, ಭಕ್ತರಾದ ಕರಿಬಸಣ್ಣ, ಮೌನಾಚಾರ್, ಗೋವಿಂದಪ್ಪ ಇದ್ದರು.