ತರೀಕೆರೆ ತಾಪಂನಲ್ಲಿ ಆಯೋಜಿಸಿದ್ದ ಕಾನೂನು ಕಾರ್ಯಾಗಾರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಭಜಂತ್ರಿ ಉದ್ಘಾಟಿಸಿದರು. ಡಿ.ಸಂತೋಷ್, ಡಾ. ಆರ್.ದೇವೇಂದ್ರಪ್ಪ, ಎನ್.ಚರಣ್‌ರಾಜ್, ಸಿ.ಟಿ.ಯೋಗೀಶ್, ವೇದಮೂರ್ತಿ ಇತರರಿದ್ದರು. 
ಜಿಲ್ಲೆ

ಆಂತರಿಕ ಸಮಿತಿ ರಚಿಸಿ

ತರೀಕೆರೆ: ಸರ್ಕಾರಿ ಪ್ರತಿ ಕಚೇರಿಯಲ್ಲಿ ಆಂತರಿಕ ದೂರು ಸಮಿತಿ ರಚನೆ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಭಜಂತ್ರಿ ಹೇಳಿದರು.

ತಾಪಂನಲ್ಲಿ ಶುಕ್ರವಾರ ಪ್ರೌಢಶಾಲಾ ಮುಖ್ಯಶಿಕ್ಷಕರು, ಬಿಆರ್‌ಸಿಗಳಿಗೆ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಕಾನೂನು ಹಾಗೂ ಯೋಜನೆಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಮತ್ತು ಮಕ್ಕಳು ನಿರ್ಭೀತಿಯಿಂದ ಇರುವ ವಾತಾವರಣ ಸೃಷ್ಟಿಸುವ ಸಲುವಾಗಿ ಸರ್ಕಾರ ಕಟ್ಟುನಿಟ್ಟಿನ ಕಾನೂನು ಹಾಗೂ ನಿಯಮ ರೂಪಿಸಿದೆ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯಪ್ರವತ್ತವಾಗಿದ್ದು, ಶಾಲೆಗಳಲ್ಲಿ ದೂರು ಸಮಿತಿ ರಚಿಸಿ ಮಕ್ಕಳ ರಕ್ಷಣೆಗಾಗಿ ಮಹಿಳಾ ಶಿಕ್ಷಕರು ಸಮಾಲೋಚನೆ ನಡೆಸಬೇಕು ಎಂದು ಸೂಚಿಸಿದರು.

2013ರಲ್ಲಿ ಮಹಿಳೆಯರು ಕಾರ್ಯನಿರ್ವಹಿಸುವ ಕಚೇರಿಗಳಲ್ಲಿ ಲೈಂಗಿಕ ಶೋಷಣೆ ತಡೆಗಟ್ಟುವ ಕಾಯ್ದೆ ಕಡ್ಡಾಯಗೊಳಿಸಲಾಗಿದೆ. ಇದೀಗ ಆಂತರಿಕ ದೂರು ಸಮಿತಿ ರಚಿಸಿ ಎಸ್‌ಎಚ್‌ಇ ಪೋರ್ಟಲ್ ಮೂಲಕ ಮಾಹಿತಿ ನೀಡಬೇಕು. 10ಕ್ಕಿಂತ ಕಡಿಮೆ ನೌಕರರು ಕರ್ತವ್ಯ ನಿರ್ವಹಿಸುವಂಥ ಸ್ಥಳಗಳಲ್ಲಿ ಕಚೇರಿ ಮುಖ್ಯಾಧಿಕಾರಿಗಳು ಆಗಾಗ ಸಭೆ ನಡೆಸಿ ದೂರು ಪಡೆದು ಕೂಡಲೇ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಡಿ.ಸಂತೋಷ್ ಮಾತನಾಡಿ, ಮಹಿಳೆಯರು ಎದುರಾಗಬಹುದಾದ ಕೌಟುಂಬಿಕ ಸಮಾಲೋಚನೆಗೆ ಒಳಗಾಗಲು ಶಿಶು ಅಭಿವೃದ್ಧಿ ಯೋಜನಾ ಕಚೇರಿ ಅಥವಾ ಹತ್ತಿರುವ ಅಂಗನವಾಡಿ ಕೇಂದ್ರಕ್ಕೆ ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ತಾಪಂ ಇಒ ಡಾ. ಆರ್.ದೇವೇಂದ್ರಪ್ಪ ಮಾತನಾಡಿ, ಇಂಥ ಕಾರ್ಯಾಗಾರಗಳಿಂದ ಮಹಿಳೆಯರು ಮತ್ತು ಮಕ್ಕಳ ಶೋಷಣೆ ತಡೆಗಟ್ಟಲು ಮಾತ್ರವಲ್ಲ, ಅವರ ಸಮಗ್ರ ಅಭಿವದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಸಿಡಿಪಿಒ ಎನ್.ಚರಣ್‌ರಾಜ್, ಶಿಕ್ಷಣ ಇಲಾಖೆ ಅಧಿಕಾರಿ ವೇದಮೂರ್ತಿ, ನರೇಗಾ ಸಹಾಯಕ ನಿರ್ದೇಶಕ ಸಿ.ಟಿ.ಯೋಗೀಶ್, ಕೆ.ಸಿ.ವಿಜಯಕುಮಾರಿ ಇತರರಿದ್ದರು.