ಜಿಲ್ಲೆ

ಆಂತರಿಕ ಸಂಪನ್ಮೂಲ ಬಳಕೆಗೆ ವಿರೋಧ ; ಕುಲಸಚಿವರಿಗೆ ಪತ್ರ ಬರೆದ ಸಂಘ *ಹೊಸ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣ

ತುಮಕೂರು : ಹೊಸ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಆಂತರಿಕ ಸಂಪನ್ಮೂಲ ಬಳಸುವ ತುಮಕೂರು ವಿವಿ ಆಡಳಿತ ಮಂಡಳಿ ನಡೆಗೆ ವಿವಿ ಅಧ್ಯಾಪಕರ ಸಂಘ ಮತ್ತೊಮ್ಮೆ ವಿರೋಧ ವ್ಯಕ್ತಪಡಿಸಿದೆ. ಕಳೆದ ವರ್ಷ ಜೂನ್‌ನಲ್ಲಿ ಬಿದರೆಕಟ್ಟೆ ನೂತನ ಕ್ಯಾಂಪಸ್‌ನಲ್ಲಿ ಕಟ್ಟಡ ಕಾಮಗಾರಿಗೆ ವಿವಿ ಆಂತರಿಕ ಸಂಪನ್ಮೂಲ ಬಳಸುವ ವಿವಿ ಆಡಳಿತ ಮಂಡಳಿ ನಿರ್ಧಾರಕ್ಕೆ ವ್ಯಾಪಕವಾಗಿ ವಿರೋಧವಾಗಿತ್ತು. ಅಲ್ಲದೆ ವಿವಿ ಸಿಂಡಿಕೇಟ್ ಸಭೆಯಲ್ಲೂ 28 ಕೋಟಿ ರೂ., ಆಂತರಿಕ ಸಂಪನ್ಮೂಲ ಬಳಸದಂತೆ ನಿರ್ಣಯ ಕೈಗೊಳ್ಳಲಾಗಿತ್ತು. ವಿದ್ಯಾವಿಷಯಕ ಪರಿಷತ್ ಸದಸ್ಯರು, ವಿವಿ ಅಧ್ಯಾಪಕರ ಸಂಘದ ಪದಾಧಿಕಾರಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಈಗ ಮತ್ತೊಮ್ಮೆ ಆಂತರಿಕ ಸಂಪನ್ಮೂಲ ಬಳಕೆ ವಿವಾದ ಭುಗಿಲೆದ್ದಿದೆ. ಇತ್ತೀಚೆಗೆ ತಾಂತ್ರಿಕ ಸಮಿತಿ ಸಭೆಯಲ್ಲಿ ಸಾಕಷ್ಟು ವಿರೋಧದ ನಡುವೆಯೂ ನೂತನ ಕ್ಯಾಂಪಸ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ಆಂತರಿಕ ಸಂಪನ್ಮೂಲ ಬಳಸಲು ಹಣಕಾಸು ಸಮಿತಿ ಸಭೆಯಲ್ಲಿ ಅನುಮೋದನೆ ನೀಡಿರುವುದು ಅಧ್ಯಾಪಕರ ಸಂಘವನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ (ಜ.28) ನಡೆಯಲಿರುವ ವಿವಿ ಸಿಂಡಿಕೇಟ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಲಿದ್ದು, ಇದಕ್ಕೆ ತಮ್ಮ ಸಂಪೂರ್ಣ ವಿರೋಧ ಇರುವುದಾಗಿ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಎಚ್. ಶಿವಲಿಂಗಯ್ಯ ಅವರು ಕುಲಸಚಿವರಿಗೆ ಬರೆದಿರುವ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ನ್ಯಾಯಾಲಯದ ಮೊರೆ ; ವಿವಿ ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಸಹ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಘದ ಮನವಿ ಹೊರತಾಗಿಯೂ ವಿವಿ ಆಡಳಿತವು ಯಾವುದೇ ಕಾಮಗಾರಿಗೆ ಆಂತರಿಕ ಸಂಪನ್ಮೂಲ ಬಳಸಿದ್ದೇ ಆದಲ್ಲಿ ನಾವು ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯ ಸ್ಥಿತಿ ಎದುರಾಗಬಹುದು ಎಂದು ಅಧ್ಯಾಪಕರ ಸಂಘವು ಪತ್ರದಲ್ಲಿ ಎಚ್ಚರಿಸಿರುವುದು ವಿವಿ ಆಡಳಿತ ಮಂಡಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ವಿವಿ ನಡೆಗೆ ಕಡಿವಾಣ ಹಾಕುವ ಮೂಲಕ ಶುಕ್ರವಾರದ ಸಿಂಡಿಕೇಟ್ ಸಭೆಯು ಆಂತರಿಕ ಸಂಪನ್ಮೂಲ ವಿವಾದಕ್ಕೆ ತೆರೆ ಎಳೆಯಲಿದೆಯೇ ಕಾದುನೋಡಬೇಕಿದೆ.