ಜಿಲ್ಲೆ

ಆಂಜನೇಯ ಸ್ವಾಮಿ ರಥೋತ್ಸವ ಅದ್ದೂರಿ

ಚಿತ್ರದುರ್ಗ: ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ದೊಡ್ಡ ರಥೋತ್ಸವವೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಅದ್ದೂರಿಯಾಗಿ ಜರುಗಿತು.

ಅನೇಕ ಭಕ್ತರು ಕಾತರದಿಂದ ಕಾದು ಸ್ವಾಮಿಯ ರಥ ಎಳೆಯುವ ಕ್ಷಣವನ್ನು ಕಣ್ತುಂಬಿಕೊಂಡರು. ಇದೇ ವೇಳೆ ಆಂಜನೇಯ ಸ್ವಾಮಿ ಕೀ ಜೈ, ಜೈ ಶ್ರೀರಾಮ್, ಜೈ ಜೈ ಶ್ರೀರಾಮ್ ಎಂದು ಜಯಘೋಷ ಮೊಳಗಿಸಿದರು. ಈ ವೇಳೆ ಭಕ್ತೋತ್ಸಾಹ ಮುಗಿಲುಮುಟ್ಟಿತು.

ರಥಕ್ಕೆ ಬಾಳೆಹಣ್ಣನ್ನು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಾಮಿಗೆ ಮುಂಜಾನೆ ಅಭಿಷೇಕ, ಅಲಂಕಾರ ಸೇವೆ ಸೇರಿ ಇತರೆ ಪೂಜಾ ಕೈಂಕರ್ಯ ಶಾಸ್ತ್ರೋಕ್ತವಾಗಿ ನೆರವೇರಿದವು.

ರಥೋತ್ಸವಕ್ಕೂ ಮುನ್ನ ರಥವನ್ನು ಬೃಹದಾಕಾರದ ಹೂವಿನ ಹಾರಗಳಿಂದ ಅಲಂಕರಿಸಲಾಯಿತು. ನಂತರ ದೇಗುಲದಿಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಕರೆತಂದು ಪೂಜೆ ಸಲ್ಲಿಸಲಾಯಿತು. ಮೂರ್ತಿಯನ್ನು ರಥದ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ರಥದೊಳಗೆ ಪ್ರತಿಷ್ಠಾಪಿಸಲಾಯಿತು. ಬಳಿಕ ಮುಕ್ತಿಬಾವುಟ ಮತ್ತು ಹೂವಿನ ಹಾರ ಹರಾಜು ಪ್ರಕ್ರಿಯೆ ನಡೆಯಿತು.