ಜಿಲ್ಲೆ

ಆಂಜನೇಯ ಸ್ವಾಮಿ ದೇಗುಲ ಲೋಕಾರ್ಪಣೆ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಸೊಂಡೇಕೆರೆ, ರಾಮಜೋಗಿಹಳ್ಳಿ, ಎಂ.ಡಿ.ಕೋಟೆ ವ್ಯಾಪ್ತಿಯ ಹಾಳೂರು ಆಂಜನೇಯ ಸ್ವಾಮಿ ದೇಗುಲ ಶುಕ್ರವಾರ ಲೋಕಾರ್ಪಣೆಗೊಂಡಿತು.

ಅಭಿಷೇಕ, ಹೋಮ ಸೇರಿ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಸಾವಿರಾರು ಭಕ್ತರು ಭೇಟಿ ನೀಡಿ ಸ್ವಾಮಿಯ ನೂತನ ದೇಗುಲ, ಮೂರ್ತಿ ಕಣ್ತುಂಬಿಕೊಂಡು ಭಕ್ತಿಯಲ್ಲಿ ಮಿಂದೆದ್ದರು.

ಹೋಮ, ನಾಗರ, ದೃಷ್ಟಿ, ಕಳಸ, ವಿಗ್ರಹ, ದೀಪಾ ಸ್ತಂಭ, ಓಕಳಿ, ಅರಿಶಿಣ-ಕುಂಕುಮ, ಹೂ-ಬಿಲ್ವ ಪತ್ರೆ, ದವಸ-ಧಾನ್ಯ, ಗಂಗಾಪೂಜೆ ಸೇರಿ ಇತರೆ ಪೂಜೆಗಳು ನೆರವೇರಿದವು. ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.

ಸೊಂಡೇಕೆರೆ ಕೆಂಚಾಂಬ ದೇವಿಯನ್ನು ಅಣ್ಣನ ಸನ್ನಧಿಯಾದ ಆಂಜನೇಯ ಸ್ವಾಮಿ ದೇಗುಲಕ್ಕೆ ಹೂವಿನ ಪಲ್ಲಕ್ಕಿಯಲ್ಲಿ ವಿಶೇಷ ಅಲಂಕಾರದೊಂದಿಗೆ ಕರೆತರಲಾಯಿತು. ರಾಮಜೋಗಿಹಳ್ಳಿ ಮಾರ್ಗವಾಗಿ ಸಂಚರಿಸಿ ದೇಗುಲ ತಲುಪಿತು.

ಲೋಕಾರ್ಪಣೆ ಅಂಗವಾಗಿ ಇಡೀ ದೇಗುಲವನ್ನು ತಳಿರು, ತೋರಣ, ಹೂವುಗಳಿಂದ ಅಲಂಕರಿಸಲಾಗಿತ್ತು. 75 ಸಾವಿರ ರೂ. ಮೌಲ್ಯದ ಹೂವಿನ ಹಾರವನ್ನು ಕ್ರೇನ್ ಸಹಾಯದಿಂದ ದೇಗುಲ ಹೊರಭಾಗದಲ್ಲಿ ನಿರ್ಮಾಣವಾಗಿರುವ ಬೃಹತ್ ಗಾತ್ರದ ಆಂಜನೇಯನ ಮೂರ್ತಿಗೆ ಹಾಕಿದ ವೇಳೆ ಭಕ್ತರ ಸಂಭ್ರಮ ಮುಗಿಲುಮುಟ್ಟಿತು.

ಸ್ವಾಮಿಯ ಅಪ್ಪಣೆ ಮೇರೆಗೆ ಯುವಸಮೂಹ ಹಾಗೂ ಸದ್ಭಕ್ತರ ಸಹಕಾರದಿಂದ ದೇಗುಲ ನೂತನ ವಿನ್ಯಾಸದೊಂದಿಗೆ ನಿರ್ಮಾಣವಾಗಿದ್ದು, ಸುತ್ತಮುತ್ತಲಿನ ಗ್ರಾಮಗಳ ಭಕ್ತರನ್ನು ಸೆಳೆಯಿತು.

ಗೊಲ್ಲನಕಟ್ಟೆ ಜುಂಜೇಶ್ವರ, ನರಹರಿ ಸದ್ಗುರು, ಸೊಂಡೇಕೆರೆ ಸಕ್ರಪ್ಪ ಸ್ವಾಮಿ, ಹೆಗ್ಗೆರೆ ಕೆಂಚಾವಧೂತ, ರಾಮಜೋಗಿಹಳ್ಳಿ ಕೆಂಚಾವಧೂತ ತಿಪ್ಪೇರುದ್ರಸ್ವಾಮಿ, ಎಂ.ಡಿ.ಕೋಟೆ ಆಂಜನೇಯ ಸ್ವಾಮಿ ಭಜನಾ ತಂಡದವರು ಆಂಜನೇಯ ಸ್ವಾಮಿ, ಕೆಂಚಾಂಬ ದೇವಿ, ವದ್ದಿಕೆರೆ ಸಿದ್ದೇಶ್ವರ, ಕೆಂಚಾವಧೂತರ ಇತಿಹಾಸ ಕುರಿತು ಜಾನಪಾದ ಗೀತೆಗಳನ್ನು ಹಾಡಿ ಭಕ್ತರ ಗಮನ ಸೆಳೆದರು.