Oplus_16908288 
ಜಿಲ್ಲೆ

ಆಂಗ್ಲ ಭಾಷೆ ಶಿಕ್ಷಕರ ವರ್ಗಾವಣೆಗೆ ವಿರೋಧ

ಲಲಾಟಾಕ್ಷ ಎಸ್

ನಂಜನಗೂಡು: ಆಂಗ್ಲ ಭಾಷೆ ಶಿಕ್ಷಕರ ವರ್ಗಾವಣೆ ವಿರೋಧಿಸಿ ಹಾಗೂ ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ಶುಕ್ರವಾರ ತಾಲೂಕಿನ ಕೋಣನೂರು ಸರ್ಕಾರಿ ಶಾಲಾ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪಾಲಕರು ಪ್ರತಿಭಟನೆ ನಡೆಸಿದರು.

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕು ಕೋಣನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಜಮಾಯಿಸಿದ ಪಾಲಕರು ಮಕ್ಕಳನ್ನು ತರಗತಿಗಳಿಗೆ ಕಳುಹಿಸದೆ ಶಾಲೆಯ ಪ್ರವೇಶ ದ್ವಾರವನ್ನು ಬಂದ್ ಮಾಡಿದರು. ಸರ್ಕಾರ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಸ್.ಬಸವಣ್ಣ ಮಾತನಾಡಿ, ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸುಮಾರು 120ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ಸಮಿತಿ ಮನವಿ ಮಾಡಿ ದಾಖಲಿಸಿತ್ತು. ಶಾಲೆಯಲ್ಲಿ ಕೇವಲ ಮೂವರು ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಆಂಗ್ಲ ಭಾಷಾ ಶಿಕ್ಷಕರನ್ನು ವರ್ಗಾವಣೆ ಮಾಡಿದ್ದಾರೆ. ಮುಖ್ಯ ಶಿಕ್ಷಕರ ಹುದ್ದೆಯೂ ಖಾಲಿ ಇದೆ. ಇಂಗ್ಲಿಷ್ ಶಿಕ್ಷಕರು ಶಾಲೆಗೆ ಬಂದ ಮೇಲೆ ಮಕ್ಕಳು ಇಂಗ್ಲಿಷ್ ಜತೆಗೆ ಹಿಂದಿ ಭಾಷೆಯನ್ನು ಮಕ್ಕಳಿಗೆ ತುಂಬಾ ಚೆನ್ನಾಗಿ ಹೇಳಿಕೊಡುತ್ತಿದ್ದರು. ಈಗ ವರ್ಗಾವಣೆ ಮಾಡಿರುವುದು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಕೂಡಲೇ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ವರ್ಗಾವಣೆ ರದ್ದು ಮಾಡಿ ಆಂಗ್ಲ ಭಾಷೆ ಶಿಕ್ಷಕರನ್ನು ಶಾಲೆಯಲ್ಲೇ ಮುಂದುವರಿಸಬೇಕು. ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡಬೇಕು. ಇಲ್ಲವಾದಲ್ಲಿ ಗ್ರಾಮಸ್ಥರೊಂದಿಗೆ ದೊಡ್ಡ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

7ನೇ ತರಗತಿ ವಿದ್ಯಾರ್ಥಿ ಶಾಂಭವಿ ಮಾತನಾಡಿ, ಆಂಗ್ಲ ಭಾಷೆ ಶಿಕ್ಷಕರಾದ ಅನಿಲ್ ಸರ್ ಅವರು ನಮ್ಮ ಶಾಲೆಗೆ ಬಂದ ಮೇಲೆ ನಮ್ಮ ಇಂಗ್ಲಿಷ್ ಭಾಷೆಯ ಕೌಶಲ ಉತ್ತಮವಾಗಿದೆ. ಈಗ ವರ್ಗಾವಣೆಯಿಂದ ನಮಗೆ ಹಿನ್ನಡೆಯಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ವರ್ಗಾವಣೆ ರದ್ದು ಮಾಡಬೇಕು ಎಂದು ಮನವಿ ಮಾಡಿದಳು.

ಸ್ಥಳಕ್ಕೆ ದಾಸನೂರು ಕ್ಲಸ್ಟರ್ ಸಿಆರ್‌ಪಿ ಚಂದ್ರಶೇಖರ್ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು. ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಪ್ರತಿಭಟನೆ ಅಂತ್ಯಗೊಳಿಸಿದರು. ರಾಜ್ಯ ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥ್, ಮಹದೇವಸ್ವಾಮಿ, ಬಸವಣ್ಣ, ಬಸಮ್ಮಣಿ, ಪವಿತ್ರಾ, ಮಹದೇವಮ್ಮ, ಮಧು, ಅಭಿಲಾಷ್, ಭಾಗ್ಯಮ್ಮ, ಸುಮಲತಾ, ಪುಟ್ಟಸುಬ್ಬಪ್ಪ , ನಟರಾಜು, ಪಟೇಲ್ ಬಸಪ್ಪ, ಕುಮಾರ್, ಬೆಳಿಗಿರಿರಂಗ ಶೆಟ್ಟಿ ಭಾಗವಹಿಸಿದ್ದರು.

ಶಿಕ್ಷಕರ ವರ್ಗಾವಣೆ ಸರ್ಕಾರದ ಮಟ್ಟದಲ್ಲಿ ನಡೆದಿರುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನಾನು ಏನೂ ಮಾಡಲು ಸಾಧ್ಯವಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರ್ಯಾಯ ಕ್ರಮವನ್ನು ಕೈಗೊಳ್ಳುತ್ತೇನೆ. ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ನಂಜನಗೂಡು