ಬಾಗಲಕೋಟೆ: ನಗರದ ಬಿವಿವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯಕ್ಕೆ ಆಗಸ್ಟ್ ೧ ಮತ್ತು ೨ರಂದು ನ್ಯಾಕ್ ತಂಡ ಭೇಟಿ ನೀಡಲಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾವಿದ್ಯಾಲಯದಲ್ಲಿ ೯೧೩ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಅಧ್ಯಯನದಲ್ಲಿ ತೊಡಗಿಕೊಂಡಿರುವುದು ಅಭಿಮಾನದ ಸಂಗತಿಯಾಗಿದೆ. ಮಹಾವಿದ್ಯಾಲಯವು ನಾಲ್ಕನೇಯ ಆವೃತ್ತಿಯ ನ್ಯಾಕ್‌ಗೆ ಒಳಪಡಲಿದೆ. ನ್ಯಾಕ್ ಸಮಿತಿಯ ಮೂರು ಜನ ಸದಸ್ಯರು ಎರಡು ದಿನಗಳವರೆಗೆ ಮಹಾವಿದ್ಯಾಲಯದ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ ಎಂದರು.
ಉತ್ತರ ಕರ್ನಾಟಕದ ಎರಡನೇಯ ಪ್ರತಿಷ್ಠಿತ ವಾಣಿಜ್ಯ ಮಹಾವಿದ್ಯಾಲಯ ಎಂದು ಹೆಸರು ಪಡೆದುಕೊಂಡಿದ್ದು ೧೯೭೧ ರಲ್ಲಿ ಮಹಾವಿದ್ಯಾಲಯ, ವಿಶ್ವವಿದ್ಯಾಲಯದ ಅನುದಾನ ಸಂಸ್ಥೆ (ಯುಜಿಸಿ)ಯಿಂದ ೨ಎಫ್ ಮಾನ್ಯತೆಯನ್ನು ಪಡೆದುಕೊಂಡಿತು. ಮುಂದೆ ೧೯೯೦ ರಲ್ಲಿ ಯುಜಿಸಿಯಿಂದ ೧೨ಬಿ ಮಾನ್ಯತೆಯನ್ನು ಪಡೆದುಕೊಂಡು ಸಂಪೂರ್ಣ ಸರ್ಕಾರದ ಅನುದಾನಕ್ಕೆ ಒಳಪಟ್ಟಿತು. ಈಗ ನ್ಯಾಕ್ ತಂಡ ಭೇಟಿ ನೀಡಲಿದ್ದು ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯಕ್ಕೆ ಎ ಗ್ರೇಡ್ ಸಿಗುವ ಭರವಸೆ ಇದೆ ಎಂದು ಹೇಳಿದರು.
ಐದು ದಶಕಗಳ ಕಾಲದ ನಡಿಗೆಯಲ್ಲಿ ಮಹಾವಿದ್ಯಾಲಯ ನಾಡಿನ ಉದ್ದಗಲಕ್ಕೂ ತನ್ನ ಪ್ರತಿಭಾ ಸಂಪನ್ನ ವಿದ್ಯಾರ್ಥಿಗಳನ್ನು ಹರಿಬಿಟ್ಟು ತನ್ನ ಗರಿಮೆಯನ್ನು ಚಾಚಿಕೊಂಡಿದೆ. ನಾಡವರ ಬೌದ್ಧಿಕ, ವ್ಯಾವಹಾರಿಕ ಹಾಗೂ ಸಾಂಸ್ಕೃತಿಕ ಆಶೋತ್ತರಗಳನ್ನು ಪೂರೈಸುತ್ತಲೇ ಬಂದಿರುವ ನಾಡಿನ ಹಿರಿಯ ಶೈಕ್ಷಣಿಕ ಮಹಾವಿದ್ಯಾಲಯ ಎಂದರು.
ವಾಣಿಜ್ಯ ಶಾಸ್ತ್ರದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಇಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ೧೯೯೬ ರಲ್ಲಿ ಬಿಬಿಎ ಹೊಸ ಪದವಿ ಆರಂಭಿಸಿದಾಗಿನಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲಿದೆ. ೨೦೦೧ ರಲ್ಲಿ ವಾಣಿಜ್ಯ ಶಾಸ್ತ್ರದ ಸ್ನಾತಕೋತ್ತರ ಕೋರ್ಸ್ ಆರಂಭಿಸಿದ್ದು ಗುಣಮಟ್ಟದ ತರಬೇತಿಯನ್ನು ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.
೨೦೧೯ ರಲ್ಲಿ ಐಸಿಎಐ ನ್ಯೂ ದಿಲ್ಲಿ, ನೋಯ್ಡಾದಿಂದ ಮಾನ್ಯತೆ ಪಡೆದು ಲೆಕ್ಕ ಪರಿಶೋಧಕರ ತರಬೇತಿ ಕೋರ್ಸ್ ಕೂಡ ಕಾಲೇಜಿನಲ್ಲಿ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ವಿಶೇಷ ಸೌಲಭ್ಯ ಒದಗಿಸಲಾಗಿದೆ. ಸ್ಪರ್ಧಾ ಜಗತ್ತಿಗೆ ಹೊಂದಿಕೊಳ್ಳುವಂತೆ ಮಹಾವಿದ್ಯಾಲಯವು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ, ವ್ಯಕ್ತಿತ್ವ ವಿಕಸನ, ಸಂಹವನ ಕೌಶಲಗಳನ್ನು ಬೆಳೆಸುವುದರೊಂದಿಗೆ ಉದ್ಯೋಗ ದೊರಕಿಸಿ ಕೊಡುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಪ್ರಾಚಾರ್ಯ ಡಾ.ಎಸ್.ಎಂ.ಬಗಾಂವಕರ, ಐಕ್ಯೂಎಸಿ ಸಂಯೋಜಕಿ ಗಿರಿಜಾ ನಾವದಗಿ ಇದ್ದರು.